ಆದಿತ್ಯಾ ಬಿರ್ಲಾ ಗ್ರಾಸಿಂ ಇಂಡಸ್ಟ್ರಿ’ಯಲ್ಲಿ ಕ್ಲೋರಿನ್ ಸೋರಿಕೆಗೆ ಕಾರಣ ಗೊತ್ತಾಗಿದೆ. `ಜನವರಿ 11ರಂದು ವಿದ್ಯುತ್ ಕಡಿತವಾಗಿರುವುದೇ ಕ್ಲೋರಿನ್ ಸೋರಿಕೆಗೆ ಕಾರಣ’ ಎಂದು ತನಿಖಾ ವರದಿ ಸ್ಪಷ್ಟಪಡಿಸಿದೆ. ಆ ದಿನ 19 ಕಾರ್ಮಿಕರು ಅಸ್ವಸ್ಥಗೊಂಡಿರುವುದಕ್ಕೆ ಕಾರಣ ಗೊತ್ತಾಗಿದೆಯೇ ವಿನ: ಅದಕ್ಕೂ ಮುನ್ನ ಕಾರ್ಮಿಕನೊಬ್ಬ ಸಾವನಪ್ಪಿರುವುದಕ್ಕೆ ಕಾರಣ ಬಹಿರಂಗವಾಗಿಲ್ಲ!
ಬಿಣಗಾದ ಗ್ರಾಸಿಂ ಇಂಡಸ್ಟಿಸ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥರಾಗಿದ್ದರು. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕಂಪನಿ ವಿರುದ್ಧ ಅನೇಕರು ಆಕ್ರೋಶವ್ಯಕ್ತಪಡಿಸಿದ್ದರು. ಈ ಬಗ್ಗೆ ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಸುರಕ್ಷತಾ ಆಡಿಟ್ ವರದಿ ನೀಡುವವರೆಗೆ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ಈ ಹಿನ್ನಲೆ ತನಿಖೆ ನಡೆದಿದ್ದು, ಅದರ ವರದಿ ಇದೀಗ ಹೊರಬಿದ್ದಿದೆ. `ಕೈಗಾರಿಕೆಗೆ ಸರಬರಾಜಾಗುತ್ತಿದ್ದ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಸ್ವಯಂ ಚಾಲಿತವಾಗಿ ಕೆಲಸ ಮಾಡಬೇಕಿದ್ದ ಯುಪಿಎಸ್ ಸಹ ಕೈ ಕೊಟ್ಟಿದ್ದರಿಂದ ದುರಂತ ನಡೆದಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
`ಪ್ರಸ್ತುತ ಕೈಗಾರಿಕೆಯಲ್ಲಿ ಸೆಲ್ಫ್ ಪವರ್ ಡಿಜಿ ಅಳವಡಿಸಿದ್ದು, ಸ್ವಯಂ ಚಾಲಿತ ವ್ಯವಸ್ಥೆ ಹಾಗೂ ಕ್ಲೋರಿನ್ ಸೋರಿಕೆ ನಿಯಂತ್ರಣ ತಪ್ಪಿಸಲು ಕ್ಯಾಸ್ಟಿಕ್ ಸೋಡಾ ಟ್ಯಾಂಕ್ ಅಳವಡಿಕೆ ಸೇರಿ ಗರಿಷ್ಠ ಸುರಕ್ಷತಾ ಕ್ರಮ ಅನುಸರಿಸಿರುವ ಬಗ್ಗೆ ತನಿಖಾಧಿಕಾರಿಗಳು ಹೆಚ್ಚುವರಿ ವಿವರಣೆಯನ್ನು ನೀಡಿದ್ದಾರೆ. ಈ ಹಿನ್ನಲೆ ಸೆಪ್ಟಿ ಆಡಿಟ್ ಪರಿಶೀಲಿಸಿ ಪುನ: ಕೈಗಾರಿಕೆಯನ್ನು ಆರಂಭಿಸಲು ಅನುಮತಿ ನೀಡುವಂತೆ ಸಚಿವ ಮಂಕಾಳು ವೈದ್ಯ ಸೂಚನೆ ನೀಡಿದ್ದಾರೆ.