ಸಾಮಾನ್ಯವಾಗಿ ಮೊಬೈಲ್ ಕಳೆದುಹೋದರೆ ಪೊಲೀಸ್ ದೂರು ನೀಡುತ್ತಾರೆ. ಇಲ್ಲವೇ ಸರ್ಕಾರದ ಇ-ಲಾಸ್ಟ್ ವೆಬ್‌ಸೈಟಿನಲ್ಲಿ ನೋಂದಣಿ ಮಾಡುತ್ತಾರೆ. ಆದರೆ, ಚಂದ್ರಕಾoತ ನಾಯ್ಕರು ಮೊಬೈಲ್ ಕಾಣೆಯಾದ ಬಗ್ಗೆ ಮರಕ್ಕೆ ತಂತಿ ಸುತ್ತಿ ಮೊಳೆ ಹೊಡೆದಿದ್ದಾರೆ!
ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯ ಚಂದ್ರಕಾoತ ನಾಯ್ಕ ಅವರು ಶುಕ್ರವಾರ ಸಂಜೆ ಕುಚಗಾಂವ್ ಬಸ್ ನಿಲ್ದಾಣದ ಬಳಿ ತಮ್ಮ ಮೊಬೈಲ್ ಕಳೆದುಕೊಂಡಿದ್ದಾರೆ. ಶಾಲೆ ಮಕ್ಕಳನ್ನು ಕರೆತರುವುದಕ್ಕಾಗಿ ಬೈಕ್ ಮೇಲೆ ಹೋಗುವ ಅವರು ಕುಚಗಾಂವ್ ಬಸ್ ನಿಲ್ದಾಣದ ಬಳಿಯ ಕಟ್ಟೆ ಮೇಲೆ ಕೂತಿದ್ದರು. ಆ ವೇಳೆ ಫೋನಿನಲ್ಲಿ ಮಾತನಾಡಿ, ನಂತರ ಮೊಬೈಲ್ ಅಲ್ಲಿಯೇ ಬಿಟ್ಟು ಪೇಟೆಗೆ ಹೋಗಿದ್ದಾರೆ.
ಯಲ್ಲಾಪುರ ಪಟ್ಟಣ ಸೇರಿದ ನಂತರ ಕಿಸೆಯಲ್ಲಿ ಮೊಬೈಲ್ ಇಲ್ಲದಿರುವುದು ಗೊತ್ತಾಗಿದೆ. ಕೂಡಲೇ ಬೇರೆಯವರ ಫೋನ್ ಪಡೆದು ಊರಿನವರಿಗೆ ಫೋನ್ ಮಾಡಿ ಮೊಬೈಲ್ ಹುಡುಕಾಟ ನಡೆಸಿದ್ದಾರೆ. ಆದರೆ, ಅವರು ಕೂತಿದ್ದ ಕಟ್ಟೆ ಮೇಲೆ ಮೊಬೈಲ್ ಸಿಗಲಿಲ್ಲ. 18 ಸಾವಿರ ರೂ ಮೌಲ್ಯದ ಮೊಬೈಲ್ ಕಾಣೆಯಾದ ಬಗ್ಗೆ ಅವರು ಪರಿತಪಿಸಿದ್ದಾರೆ.
ಚಂದ್ರಕಾoತ ನಾಯ್ಕರ ಜೊತೆ ಮತ್ತೆ ಮೂವರು ನಿತ್ಯ ಮಕ್ಕಳನ್ನು ಶಾಲೆಗೆ ಬಿಡುವುದು ಹಾಗೂ ಸಂಜೆ ಮನೆಗೆ ಮರಳಿ ಕರೆದೊಯ್ಯುವುದು ಮಾಡುತ್ತಾರೆ. ತಮ್ಮೊಂದಿಗೆ ಶಾಲೆಗೆ ಬರುವ ಸ್ನೇಹಿತರಲ್ಲಿಯೂ ಅವರು ಮೊಬೈಲ್ ಕಾಣೆಯಾದ ಬಗ್ಗೆ ಹೇಳಿದ್ದಾರೆ. ನಂತರ ಎಲ್ಲರೂ ಸೇರಿ ಕುಚಗಾಂವ್ ಬಸ್ ನಿಲ್ದಾಣದ ಸುತ್ತ ಹುಡುಕಿದರೂ ಮೊಬೈಲ್ ಸಿಕ್ಕಿಲ್ಲ.
ಕೊನೆಗೆ `ಮೊಬೈಲ್ ಸಿಕ್ಕವರು ದಯವಿಟ್ಟು ಮರಳಿಸಿ’ ಎಂದು ಬರೆದು ಅಲ್ಲಿದ್ದ ಮತ್ತಿ ಮರಕ್ಕೆ ಬೋರ್ಡ ಅಂಟಿಸಿದ್ದಾರೆ. `ಮೊಬೈಲ್ ಸಿಕ್ಕರೆ ಶಾಲೆಗೆ ತಂದುಕೊಡಿ’ ಪಕ್ಕದ ರಸ್ತೆ ಬೋರ್ಡಿನ ಮೇಲೆಯೂ ಚೀಟಿ ಅಂಟಿಸಲಾಗಿದೆ. ಆ ಚೀಟಿಯಲ್ಲಿ `ಆಕಾಶ 6ಎ – ಕನ್ನಡ ಮಿಡಿಯಂ’ ಎಂಬ ಹೆಸರಿದೆ. ಅದರೊಂದಿಗೆ ಪ್ರಸಾದ ಎಂಬ ಇನ್ನೊಬ್ಬ ವಿದ್ಯಾರ್ಥಿಯ ಹೆಸರನ್ನು ಬರೆಯಲಾಗಿದೆ. ಮರಕ್ಕೆ ಅಂಟಿದ ಬೋರ್ಡಿನಲ್ಲಿ ಮೂರು ಫೋನ್ ನಂ ಬರೆಯಲಾಗಿದೆ. ಅದರಲ್ಲಿ ಎರಡು ಫೋನ್ ನಂ ವ್ಯಾಪ್ತಿ ಪ್ರದೇಶದ ಹೊರಗಿದೆ.
ಮರದ ಮೇಲಿನ ಬೋರ್ಡ ನೋಡಲು ಅನೇಕರು ಕುಚಗಾಂವ್ ಬಸ್ ನಿಲ್ದಾಣದ ಬಳಿ ನಿಲ್ಲುತ್ತಿದ್ದಾರೆ. ಹೀಗಾಗಿ ಚಂದ್ರಕಾoತ ನಾಯ್ಕರ ಮೊಬೈಲ್ ಕಾಣೆಯಾದ ಸುದ್ದಿ ಊರ ತುಂಬ ಹಬ್ಬಿದೆ. ಅದಾಗಿಯೂ ಈವರೆಗೆ ಅವರ ಮೊಬೈಲ್ ಸಿಕ್ಕಿಲ್ಲ.




