ಕುಮಟಾ ಹಳೆ ಬಸ್ ನಿಲ್ದಾಣದ ಬಳಿಯ ಪೊಲೀಸ್ ಠಾಣೆಗೆ ತೆರಳುವ ರಸ್ತೆ ಅಂಚಿನ ಗಟಾರಕ್ಕೆ ಮುಚ್ಚುಗೆ ಇಲ್ಲ. ಪರಿಣಾಮ ನಿತ್ಯ ಇಲ್ಲಿ ಅವಘಡ ನಡೆಯುತ್ತಿದೆ.
ಪೊಲೀಸ್ ಠಾಣೆಗೆ ತೆರಳುವ ಮಾರ್ಗದಲ್ಲಿ ಮೂರು ರಸ್ತೆ ಕೂಡುತ್ತದೆ. ಆ ರಸ್ತೆ ಅಂಚಿನ ಗಟಾರ ಗಬ್ಬೆದ್ದಿದ್ದು ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಾರೆ. ಈ ತಿರುವಿನಲ್ಲಿ ಓಡಾಡುವ ಜಾನುವಾರುಗಳು ಸಹ ಆಯತಪ್ಪಿ ಗಟಾರಕ್ಕೆ ಇಳಿಯುತ್ತಿವೆ. ಜನರು ಗಟಾರದಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಪುರಸಭೆ ಅಧಿಕಾರಿಗಳಿಗೆ ಅವಘಡದ ಬಗ್ಗೆ ಅರಿವಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಫೆ 14ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಈ ಸ್ಥಳಕ್ಕೆ ಭೇಟಿ ನೀಡಿದರು. ಅನಾಹುತ ತಡೆಗೆ ಇಲ್ಲಿ ಕೂಡಲೇ ಮುಚ್ಚಳಿಕೆ ಅಳವಡಿಸಬೇಕು ಎಂದು ಅವರು ಆಗ್ರಹಿಸಿದರು. ಪುರಸಭೆ ಸದಸ್ಯ ಮುನ್ನಾ ಸಾಬ್ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿದರು. ಒಂದು ವಾರದಲ್ಲಿ ಅವ್ಯವಸ್ಥೆ ಸರಿಪಡಿಸದೇ ಇದ್ದರೆ ಜಿಲ್ಲಾಡಳಿತಕ್ಕೆ ದೂರು ನೀಡುವುದಾಗಿ ಎಚ್ಚರಿಸಿದರು. ಕೇಂದ್ರದ ಅಧ್ಯಕ್ಷ ಆಗ್ನೇಲ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ, ಸ್ಥಳೀಯರಾದ ಅಮಿತ್, ರಾಜು ಶೆಟ್ಟಿ, ಮದುಮಿತ ಇದ್ದರು.




