ಕಾರವಾರದ ಬಾಲ ಮಂದಿರದಲ್ಲಿದ್ದ ವಿದ್ಯಾರ್ಥಿನಿ ಶ್ವೇತಾ ಪಣಿಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬoಧಿಸಿದoತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸಾವಿಗೆ ನ್ಯಾಯ ಒದಗಿಸಿ ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ.
ಬಡತನದ ಕಾರಣದಿಂದ ಶ್ವೇತಾ ಫಣ್ಣಿಕರ್ (16) ಬಾಲಕಿಯರ ಬಾಲ ಮಂದಿರ ಸೇರಿದ್ದರು. ಅಲ್ಲಿಯೇ ಉಳಿದು ಅವರು ಓದುತ್ತಿದ್ದರು. ಕಳೆದ ಗುರುವಾರ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಿದ್ದರೂ ಶ್ವೇತಾ ಅವರು ತೆರಳಿರಲಿಲ್ಲ. ಬಾಲ ಮಂದಿರದ ಕೋಣೆಯಲ್ಲಿ ಅವರು ನೇಣಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮರಣಕ್ಕೂ ಮುನ್ನ ಅವರು ಪತ್ರ ಬರೆದಿದ್ದರು.
ವಾರ್ಡನ್ ಹಾಗೂ ಸಿಬ್ಬಂದಿ ನಿತ್ಯ ಹಿಂಸೆ ನೀಡುವುದನ್ನು ಸಹಿಸದೇ ಶ್ವೇತಾ ನೇಣಿಗೆ ಶರಣಾದ ಬಗ್ಗೆ ಅವರ ಪಾಲಕರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಮಾರ್ಚ 15ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಈ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದಾರೆ. `ಈ ಸಾವಿನ ಬಗ್ಗೆ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ಹಾಗೂ ಸುಧಾಕರ್ ನಾಯ್ಕ ದೂರಿದ್ದಾರೆ.

`ಈ ಪ್ರಕರಣದಲ್ಲಿ ನಿರ್ಲಕ್ಷವಹಿಸಿದ ಅಧಿಕಾರಿಯನ್ನು ಕೂಡಲೇ ವಜಾ ಮಾಡಬೇಕು. ಆತ್ಮಹತ್ಯೆಗೆ ಕಾರಣರಾದವರ ಮೇಲೆ ಪ್ರಕರಣ ದಾಖಲಿಸಬೇಕು. ಕಾಲ ಕಾಲಕ್ಕೆ ಮಕ್ಕಳ ಜೊತೆ ಆಪ್ತ ಸಮಾಲೋಚನೆ ನಡೆಸಿ, ಅವರಿಗೆ ಭದ್ರತೆ ಒದಗಿಸಬೇಕು’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.







