ಬುಲೇರೋ ಓಡಿಸಿಕೊಂಡು ಹಳಿಯಾಳಕ್ಕೆ ಹೋಗಿದ್ದ ಗೋಕರ್ಣದ ಅಭಿಜಿತ್ ನಾಯ್ಕ ಅವರು ಅಲ್ಲಿ ಸಂಜು ಪಾಟೀಲ್ ಎಂಬಾತರ ಬೈಕಿಗೆ ಬುಲೆರೋ ಗುದ್ದಿ, ಸಂಜು ಅವರ ಸಾವಿಗೆ ಕಾರಣರಾಗಿದ್ದಾರೆ.
ಮೇ 12ರಂದು ಗೋಕರ್ಣ ಗಂಗಾವಳಿಯ ಅಭಿಜಿತ್ ನಾಯ್ಕ ಅವರು ಹಳಿಯಾಳಕ್ಕೆ ಹೋಗಿದ್ದರು. ರಾತ್ರಿ 9.15ರ ಆಸುಪಾಸಿಗೆ ಅವರು ಊರಿಗೆ ಮರಳುವ ತವಕದಲ್ಲಿದ್ದರು. ಈ ಗಡಿಬಿಡಿಯಲ್ಲಿ ಅವರು ತಮ್ಮ ಕೆಲಸ ಮುಗಿಸಲು ಹಳಿಯಾಳದಿಂದ ಆಳ್ನಾವರ ಕಡೆಗೆ ವೇಗವಾಗಿ ಬುಲೆರೋ ಓಡಿಸಿದರು.
ಹಳಿಯಾಳ-ಬೆಳಗಾವಿ ರಸ್ತೆಯ ಐಬಿ ತಿರುವಿನ ಬಳಿ ಆಳ್ನಾವರ ಕಡೆಯಿಂದ ಬರುತ್ತಿದ್ದ ಬೈಕಿಗೆ ಬುಲೆರೋ ಗುದ್ದಿದರು. ಈ ಅಪಘಾತದಿಂದ ತಲೆಗೆ ಪೆಟ್ಟು ಮಾಡಿಕೊಂಡ ಸಂಜು ಪಾಟೀಲ್ ಅವರು ಅಲ್ಲಿಯೇ ಕೊನೆಉಸಿರೆಳೆದರು.
ಬೆಳಗಾವಿಯ ಖಾನಾಪುರದ ಜಗದೀಶ ಗೌಡ ಅವರು ಈ ಅಪಘಾತದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅಭಿಜಿತ್ ನಾಯ್ಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.