ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಆದರೆ, ಹಾನಿ ಪ್ರಮಾಣ ಕಡಿಮೆ ಆಗಿಲ್ಲ.
ಎರಡು ವರ್ಷಗಳ ಹಿಂದೆ ಕಳಚೆಯಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿತ್ತು. ಕಳೆದ ವರ್ಷ ಶಿರೂರಿನಲ್ಲಿ ದೊಡ್ಡ ಪ್ರಮಾಣದ ಗುಡ್ಡ ಕುಸಿದಿತ್ತು. ಅಪಾರ ಸಾವು-ನೋವಿನ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲಾಡಳಿತ ಒಟ್ಟು 439 ಕಡೆ ಗುಡ್ಡ ಕುಸಿಯುವ ಸಾಧ್ಯತೆಯಿರುವುದನ್ನು ಗಮನಿಸಿತ್ತು. ಗುಡ್ಡ ಕುಸಿತ ಆಗದಿರಲು ಪರಿಹಾರೋಪಾಯ ಕಂಡುಕೊAಡಿದ್ದರೂ ಅದನ್ನು ಜಾರಿ ಮಾಡಲು ಸಾಧ್ಯವಾಗಿರಲಿಲ್ಲ.
ಈ ಬೆನ್ನಲ್ಲೆ ಈ ವರ್ಷದ ಮಳೆಗಾಲ ಶುರುವಾಗಿದೆ. ಸೋಮವಾರದಿಂದ ಸುರಿದ ಮಳೆಗೆ ಅಲ್ಲಲ್ಲಿ ಅನೇಕ ಅವಾಂತರಗಳು ಸೃಷ್ಠಿಯಾಗಿದೆ. ಬುಧವಾರ ಮಳೆ ಪ್ರಮಾಣ ಕಡಿಮೆಯಿದ್ದರೂ ಭೂ ಕುಸಿತ ಪ್ರಕರಣಗಳು ವರದಿಯಾಗಿದೆ. ಅದರ ಪ್ರಕಾರ ಕುಮಟಾ-ಶಿರಸಿ ರಸ್ತೆಯ ದೇವಿಮನೆ ಘಟ್ಟದಲ್ಲಿ ಕಲ್ಪಂಡೆ ಕುಸಿದಿದೆ. ಕುಮಟಾ ತಾಲೂಕಿನ ಖೈರೆ ಕ್ರಾಸಿನ ಬಳಿಯೂ ರಸ್ತೆ ಕುಸಿದಿದೆ.
ದೇವಿಮನೆ ಘಟ್ಟ ಪ್ರದೇಶದಲ್ಲಿ ಕಲ್ಬಂಡೆ ಒಡೆಯಲಾಗುತ್ತಿದ್ದು, ಬಂಡೆಯೊAದು ರಸ್ತೆಗೆ ಬಂದಿತ್ತು. ಜಿಲ್ಲಾಡಳಿತ ಇದೀಗ ಅದನ್ನು ತೆರವು ಮಾಡಿದೆ. ಮಿರ್ಜಾನ್ ಖೈರೆ ಕ್ರಾಸಿನಿಂದ ಕಗಾಲ್ ಹೋಗುವ ರಸ್ತೆ ಕುಸಿದ ಪರಿಣಾಮ ಆ ಮಾರ್ಗ ಸಂಚಾರವನ್ನು ನಿಷೇಧಿಸಲಾಗಿದೆ. ಅನೇಕ ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಗೋಕರ್ಣದಲ್ಲಿ ನೀರು ನುಗ್ಗಿದ ಪ್ರದೇಶವನ್ನು ಅಲ್ಲಿನ ಆಡಳಿತ ಸರಿಪಡಿಸಿದೆ.
ಕತಗಾಲ್ – ಮಿರ್ಜಾನ್ ರಸ್ತೆ ಸಂಚಾರ ಬಂದ್ ಮಾಡಿದ್ದರಿಂದ 18ಕಿಮೀ ಸುತ್ತುವರೆದು ಸಂಚರಿಸುವುದು ಅನಿವಾರ್ಯವಾಗಿದೆ. ಕರಾವಳಿ ಭಾಗದಲ್ಲಿ ಮಳೆ ಮುಂದುವರೆದಿದೆ. ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಜೋರಾದ ಗಾಳಿಸಹಿತ ಮಳೆ ಸುರಿದಿದೆ.
ಮತ್ತೆ ಮಳೆಯಾಗುವ ಸಾಧ್ಯತೆ ಹಿನ್ನಲೆ ಜನ ಸಾಕಷ್ಟು ಮುನ್ನಚ್ಚರಿಕೆವಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.