ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಕಡೆಯಿಂದ ಸ್ವಾಗತ-ಅಭಿನಂದನೆ ಶುರುವಾಗಿದೆ!
ಮೊದಲನೆಯದಾಗಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಜೆಪಿ ಕ್ರಮವನ್ನು ಸ್ವಾಗತಿಸಿದ್ದಾರೆ. ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಬಿಜೆಪಿಯ ಶಿಸ್ತು ಸಮಿತಿ ಯೋಗ್ಯ ನಿರ್ಣಯ ಕೈಗೊಂಡಿದೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಬಿಜೆಪಿಯಲ್ಲಿ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಬಿಜೆಪಿಯಲ್ಲಿ ಸ್ಥಾನವಿಲ್ಲ’ ಎಂದು ಕಾಗೇರಿ ಹೇಳಿದ್ದಾರೆ.
ಶಿವರಾಮ ಹೆಬ್ಬಾರ್ ಅವರ ಪುತ್ರರಾಗಿರುವ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಸಹ ಬಿಜೆಪಿಯ ನಿರ್ಣಯ ಸ್ವಾಗತಿಸಿ ವಿಡಿಯೋ ಹರಿಬಿಟ್ಟಿದ್ದಾರೆ. `ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಉಚ್ಚಾಟಿಸಿದ್ದರಿಂದ ಅವರ ಬೆಂಬಲಿಗರಿಗೆ ಸಂತಸವಾಗಿದೆ. ಹೀಗಾಗಿ ಬಿಜೆಪಿಗೆ ಅಭಿನಂದಿಸುವೆ’ ಎಂದು ವಿವೇಕ್ ಹೆಬ್ಬಾರ್ ಹೇಳಿದ್ದಾರೆ. `ಶಿವರಾಮ ಹೆಬ್ಬಾರ್ ಒಬ್ಬ ವ್ಯಕ್ತಿಯಲ್ಲ. ಅವರೊಬ್ಬ ಶಕ್ತಿ’ ಎಂದು ವಿವೇಕ ಹೆಬ್ಬಾರ್ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಕರ್ಕಿ ಸಹ ಬಿಜೆಪಿ ನಿರ್ಣಯ ಸ್ವಾಗತಿಸಿದ್ದು, `ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆಯಿಂದ ಮುಜುಗರ ತಪ್ಪಿದೆ’ ಎಂದು ಹೇಳಿಕೊಂಡಿದ್ದಾರೆ.