`ಲಾರಿ ಚಾಲಕನಾಗಿ ದುಡಿದು ಕಾರ್ಮಿಕ ಸಚಿವ ಸ್ಥಾನದವರೆಗೂ ಅಧಿಕಾರಪಡೆದಿದ್ದ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಅನಿವಾರ್ಯವಲ್ಲ. ಆದರೆ, ಬಿಜೆಪಿಗೆ ಶಿವರಾಮ ಹೆಬ್ಬಾರ್ ಅಗತ್ಯವಿದ್ದು, ಈ ಸತ್ಯ ಅರಿಯದೇ ಬಿಜೆಪಿಗರು ಅವರನ್ನು ಪಕ್ಷದಿಂದ ಹೊರದಬ್ಬಿದ್ದಾರೆ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.
`ಯಲ್ಲಾಪುರ-ಮುಂಡಗೋಡು ಹಾಗೂ ಬನವಾಸಿಯಲ್ಲಿ ಶಿವರಾಮ ಹೆಬ್ಬಾರ್ ಅವರಿಗೆ ಅಪಾರ ಪ್ರಮಾಣದ ಬೆಂಬಲಿಗರಿದ್ದಾರೆ. ಯಾವುದೇ ಚುನಾವಣೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಅವರಲ್ಲಿದೆ. ಮತದಾರರು ಹಾಗೂ ಅಭಿಮಾನಿಗಳ ಜೊತೆ ಸೌಜನ್ಯಯುತವಾಗಿ ಬೆರೆಯುವ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿ ಸರಿಯಾಗಿಲ್ಲ. ಜನಪರ ಕೆಲಸ ಮಾಡಿದ ನಾಯಕ ಎಲ್ಲಾ ಪಕ್ಷಗಳಿಗೂ ಅಗತ್ಯವಿರುವ ಸನ್ನಿವೇಶದಲ್ಲಿ ಶಿವರಾಮ ಹೆಬ್ಬಾರ್ ಅಂಥವರನ್ನು ಬಿಜೆಪಿ ಉಚ್ಚಾಟಿಸಿದ್ದು ವಿಚಿತ್ರ’ ಎಂದವರು ತಮ್ಮ ಅನಿಸಿಕೆ ಹಂಚಿಕೊoಡಿದ್ದಾರೆ.
`ಕೋವಿಡ್ ಸಮಯದಲ್ಲಿ ಹಳ್ಳಿ ಹಳ್ಳಿಗೆ ಓಡಾಡಿ ಶಿವರಾಮ ಹೆಬ್ಬಾರ್ ಸಾಕಷ್ಟು ಕೆಲಸ ಮಾಡಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅಂಥವರನ್ನು ಉಚ್ಚಾಟಿಸಿದ ಬಳಿಕ ಬಿಜೆಪಿಯ ಶಕ್ತಿ ಕಡಿಮೆಯಾಗಿದೆ’ ಎಂದವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. `ಜನನಾಯಕರಾಗಿ ಗುರುತಿಸಿಕೊಂಡಿರುವ ಶಿವರಾಮ ಹೆಬ್ಬಾರ್ ಅವರು ಇದೀಗ ಪಕ್ಷೇತರರಾಗಿಯೂ ಸ್ಪರ್ಧಿಸಿದರೂ ಗೆಲ್ಲುವಷ್ಟು ಬೆಳೆದಿದ್ದಾರೆ. ಬಿಜೆಪಿ ಅವರ ಮನವೊಲೈಸುವ ಕೆಲಸ ಮಾಡದೇ ಉಚ್ಚಾಟನೆ ಮಾಡಿದ್ದು ಸರಿಯಲ್ಲ’ ಎಂದವರು ಹೇಳಿದ್ದಾರೆ.