ಯಲ್ಲಾಪುರದ ಕಾಡಿನಲ್ಲಿ ಬಂದೂಕು ಹಿಡಿದು ಸಂಚರಿಸುತ್ತಿದ್ದವ ತಮ್ಮಾ ಕುಣಬಿ ಇದೀಗ ಪೊಲೀಸರ ಅತಿಥಿ. ಆತನ ಬಳಿಯಿದ್ದ ಒಂಟಿ ನಳಕೆಯ ಬಂದೂಕನ್ನು ಸಹ ಪೊಲೀಸರು ವಶಕ್ಕೆಪಡೆದಿದ್ದಾರೆ.
ಯಲ್ಲಾಪುರದ ಕಂಪ್ಲಿ ಗ್ರಾಮ ಪಂಚಾಯತದ ಸುರಮನೆಯಲ್ಲಿ ತಮ್ಮಾ ಕುಣಬಿ (49) ವಾಸವಾಗಿದ್ದರು. ಬುಧವಾರ ಬೆಳಗ್ಗೆ 10.45ರ ಆಸುಪಾಸಿಗೆ ಅವರು ಒಂಟಿ ನಳಕೆಯ ಬಂದೂಕು ಹಿಡಿದು ಕಾಡು ಸುತ್ತಲು ಹೊರಟಿದ್ದರು. ಅಲ್ಲಿ-ಇಲ್ಲಿ ಸುತ್ತಾಟದ ನಂತರ ಮಂಚಿಕೇರಿ ಗ್ರಾಮದ ಕೆಳಗಿನ ಮಂಚಿಕೇರಿ ಬಳಿ ಬಂದಿದ್ದರು.
ಮಣ್ಣಿನ ರಸ್ತೆಯಲ್ಲಿ ಓಡಾಡುತ್ತಿದ್ದ ತಮ್ಮಾ ಕುಣಬಿ ಪೊಲೀಸರ ಜೀಪು ಕಂಡು ಅಲ್ಲಿಯೇ ಅಡಗಲು ಪ್ರಯತ್ನಿಸಿದರು. ಆದರೆ, ಆ ಜೀಪಿನಲ್ಲಿದ್ದ ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಸುಮ್ಮನೆ ಬಿಡಲಿಲ್ಲ. ಮಣ್ಣಿನ ರಸ್ತೆಯೊಳಗೆ ಪ್ರವೇಶಿಸಿ ಕಾಡಿನ ಪೊದೆ ಹಿಂದೆ ಅವಿತುಕೊಳ್ಳಲು ಪ್ರಯತ್ನಿಸುತ್ತಿದ್ದ ತಮ್ಮಾ ಕುಣಬಿಯನ್ನು ಹಿಡಿದರು.
ಆ ಬಂದೂರು ಪರಿಶೀಲಿಸಿದಾಗ ಅದು ನಾಡ ಬಂದೂಕು ಎಂದು ಖಚಿತವಾಯಿತು. ಅದಕ್ಕೆ ಅಧಿಕೃತ ಪರವಾನಿಗೆ ಯಾವುದು ಇರಲಿಲ್ಲ. ಹೀಗಾಗಿ ಕಾಡು ಪ್ರದೇಶದ ಮಣ್ಣಿನ ರಸ್ತೆಯಲ್ಲಿ ಒಂಟಿ ನಳಕೆಯ ಬಂದೂಕು ಹಿಡಿದು ಸಂಚರಿಸುತ್ತಿದ್ದ ತಮ್ಮಾ ಕುಣಬಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಿದರು. ಆ ಬಂದೂಕನ್ನು ವಶಕ್ಕೆಪಡೆದರು. ತಮ್ಮಾ ಕುಣಬಿ ಅವರಿಗೆ ಆಯುಧ ಕಾಯ್ದೆಯ ಬಗ್ಗೆ ಪೊಲೀಸರು ಪಾಠ ಮಾಡಿ, ಕಾನೂನು ಕ್ರಮ ಜರುಗಿಸಿದರು.