6 Skip to content

ದರೋಡೆಯೇ ಅವರ ಕಾಯಕ: ಗರುಡಾ ಗ್ಯಾಂಗಿನ ಲೀಡರ್ ಸೆರೆ!

Robbery is their job: Garuda gang leader arrested!

ರಸ್ತೆಯಲ್ಲಿ ಹೋಗುಬರುವವರನ್ನು ಅಡ್ಡಗಟ್ಟಿ ದರೋಡೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ `ಗರುಡಾ ಗ್ಯಾಂಗ್’ನ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ ಪಾಟೀಲ್ ವೀರಾವೇಷದಿಂದ ಹೋರಾಡಿ ಮೂವರನ್ನು ಬಂಧಿಸಿದ್ದಾರೆ.

ಮೇ 28ರಂದು ನಸುಕಿನ 3 ಗಂಟೆಗೆ ಬಿಲಾಲ್‌ಖಂಡ ಗ್ರಾಮದ ಸಾಗರ ರಸ್ತೆ ಬಳಿ ಐದು ಜನ ಅಡಗಿ ಕುಳಿತಿದ್ದರು. ಅಲ್ಲಿ ಹೋಗಿ-ಬರುವವರನ್ನು ಅಡ್ಡಗಟ್ಟಲು ಆ ಐವರು ಸಂಚು ರೂಪಿಸಿದ್ದರು. ಇನೋವಾ ಕಾರಿನಲ್ಲಿ ಕೂತಿದ್ದ ಅವರ ಬಳಿ ಚಾಕು, ಚೂರಿ, ಕಾರಪುಡಿ ಸೇರಿ ಬಗೆ ಬಗೆಯ ವಸ್ತುಗಳಿದ್ದವು. ಮುಖ ಕಾಣದಂತೆ ಅವರೆಲ್ಲರೂ ಮಂಕಿ ಟೋಪಿ ಧರಿಸಿದ್ದರು.

ಗುಳ್ಮೆ ರಸ್ತೆ ಕ್ರಾಸಿನ ಬಳಿ ಕತ್ತಲಿನಲ್ಲಿ ಜನ ಅಡಿಗಿರುವುದನ್ನು ಕಂಡ ಭಟ್ಕಳ ಗ್ರಾಮೀಣ ಠಾಣೆ ಪಿಎಸ್‌ಐ ರನ್ನಗೌಡ ಪಾಟೀಲ್ ವಿಚಾರಣೆಗಾಗಿ ಅಲ್ಲಿಗೆ ತೆರಳಿದರು. ಆಗ ಡಕಾಯಿತರೆಲ್ಲರೂ ಓಡಿ ಹೋಗುವ ಸಿದ್ಧತೆ ನಡೆಸಿದರು. ಕಾರನ್ನು ಹಿಮ್ಮುಖವಾಗಿ ಚಲಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಕಾರು ಗಟಾರಕ್ಕೆ ಬಿದ್ದಿದ್ದು, ಈ ವೇಳೆ ಕಾರಿನಲ್ಲಿದ್ದ ಭಟ್ಕಳ ಮುಗ್ದಂ ಕಾಲೋನಿಯ ಜಿಶಾನ್, ಭಟ್ಕಳ ಬಟ್ಟಾಗಾವಿನ ನಬೀಲ್ ಓಡಿ ಪರಾರಿಯಾದರು.

ಭಟ್ಕಳ ಸಿಪಿಐ ದಿವಾಕರ್ ಪಿ ಎಂ, ಪಿಎಸ್‌ಐ ಬರಮಪ್ಪ ಬರಗಲಿ, ನವೀನ ನಾಯ್ಕ, ಶಾಂತಿನಾಥ ಪಾಸಾನೆ ಅವರು ತಮ್ಮ ಸಿಬ್ಬಂದಿ ಜೊತೆ ಆ ಇಬ್ಬರು ಡಕಾಯಿತರನ್ನು ಹಿಡಿಯುವ ಪ್ರಯತ್ನ ಮಾಡಿದರು. ಆದರೂ, ಅವರು ತಪ್ಪಿಸಿಕೊಂಡರು. ಉಳಿದ ಮೂವರನ್ನು ಹಿಡಿಯಲು ಹೋರಾಟ ನಡೆಸಿದ ಪಿಎಸ್‌ಐ ರನ್ನಗೌಡ ಪಾಟೀಲ್ ಅವರು ಪೊಲೀಸ್ ಸಿಬ್ಬಂದಿ ವಿನಾಯಕ ಪಾಟೀಲ. ಅಂಬರೀಶ ಕುಂಬಾರಿ, ವಿನೋದ ಜಿಬಿ, ಲೋಕೇಶ ಕತ್ತಿ, ನಿಂಗನಗೌಡ ಪಾಟೀಲ, ಜಗದೀಶ ನಾಯ್ಕ, ವಿಜಯ ಜಾದವ್, ದುರ್ಗೇಶ ನಾಯ್ಕ, ದೇವರಾಜ ಮೊಗೇರ್ ಜೊತೆ ಸೇರಿ ಉಳಿದ ಮೂವರನ್ನು ವಶಕ್ಕೆಪಡೆದರು. ಗರುಡಾ ಗ್ಯಾಂಗಿನ ಪ್ರಮುಖ ಆರೋಪಿತರಾದ ಮಂಗಳೂರಿನ ಜಲೀಲ ಹುಸೈನ್, ಭಟ್ಕಳದ ಗಾಂಧೀನಗರದ ಹೆಬಳೆಯ ನಾಶೀರ್ ಹಕಿಂ ಹಾಗೂ ಕಾನೂನಿನ ಪ್ರಕಾರ ಹೆಸರು-ಊರು ಹೇಳಲು ಸಾಧ್ಯವಾಗದ ಬಾಲಕರೊಬ್ಬರು ಈ ವೇಳೆ ಸಿಕ್ಕಿಬಿದ್ದರು.

ಮಂಗಳೂರಿನ ಜಲೀಲ ಹುಸೈನ್ ವಿರುದ್ಧ ಈಗಾಗಲೇ ಕಳ್ಳತನ, ದರೋಡೆ ಸೇರಿ 11 ಪ್ರಕರಣಗಳಿದ್ದವು. ಭಟ್ಕಳದ ಗಾಂಧೀನಗರದ ಹೆಬಳೆಯ ನಾಶೀರ್ ಹಕಿಂ ವಿರುದ್ಧ 2 ಪ್ರಕರಣ ಚಾಲ್ತಿಯಲ್ಲಿದ್ದವು. ಆ ಬಾಲಕನ ವಿರುದ್ಧವೂ ಒಂದು ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಸಿಕ್ಕಿಬಿದ್ದವರ ಬಳಿಯಿದ್ದ 1500ರೂ ಹಣ, ಮೊಬೈಲ್, ಚಾಕು, ಬೆಲ್ಟು, ಖಾರದಪುಡಿ ಸೇರಿ ಅವರು ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆಪಡೆದರು. ಇನ್ನೂ ತಪ್ಪಿಸಿಕೊಂಡ ಭಟ್ಕಳ ಮುಗ್ದಂ ಕಾಲೋನಿಯ ಜಿಶಾನ್, ಭಟ್ಕಳ ಬಟ್ಟಾಗಾವಿನ ನಬೀಲ್ ಪತ್ತೆಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ವಿಶೇಷ ತಂಡ ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ಎಂ, ಡಿವೈಎಸ್ಪಿ ಮಹೇಶ ಎಂ ಕೆ ಈ ಕಾರ್ಯಾಚರಣೆಗೆ ನೆರವು ನೀಡಿದರು.

You cannot copy content of this page