ಒಂದು ದಶಕದಿಂದ ನಿರಂತರವಾಗಿ ಅವೈಜ್ಞಾನಿಕ ರೀತಿ ಗುಡ್ಡ ಕತ್ತರಿಸಿದ ಪರಿಣಾಮ ಉತ್ತರ ಕನ್ನಡ ಜಿಲ್ಲೆ ನಲುಗಿ ಹೋಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಕಡೆ ಗುಡ್ಡ ಕುಸಿತ ಉಂಟಾಗಿದ್ದು, ಇದರಿಂದ ಅನೇಕ ಸಾವು-ನೋವುಗಳಾಗಿದೆ. ಅದೆಲ್ಲದರ ನಡುವೆ ಈ ವರ್ಷವೂ ಗುಡ್ಡ ಕುಸಿಯುವ ಆತಂಕ ಎದುರಾಗಿದೆ.
ಶೇ 80ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಊರುಗಳು ಗುಡ್ಡದ ತಪ್ಪಲಿನಲ್ಲಿವೆ. ತೋಟ ವಿಸ್ತರಣೆ, ರಸ್ತೆ ನಿರ್ಮಾಣ, ವಸತಿ ಉದ್ದೇಶ ಸೇರಿ ನಾನಾ ಕಾರಣಗಳಿಂದ ಇಲ್ಲಿ ಗುಡ್ಡ ಕಡಿಯಲಾಗುತ್ತಿದೆ. ರಸ್ತೆಗಾಗಿ ಕತ್ತರಿಸಿದ ಗುಡ್ಡಗಳು ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದು, ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿಯ ಹೆದ್ದಾರಿಗಳಲ್ಲಿಯೇ ಗುಡ್ಡ ಕುಸಿತದ ಅಪಾಯಗಳು ಹೆಚ್ಚಿವೆ. ಜಿಲ್ಲೆಯ ಹೆದ್ದಾರಿಗಳ ಪೈಕಿ 19 ಕಡೆ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿರುವ ಬಗ್ಗೆ ತಜ್ಞರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ.
ಪ್ರಕೃತಿ ವಿಕೋಪದ ವೇಳೆ ಸರ್ಕಾರ ಶಾಲೆಗಳನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸುತ್ತದೆ. ಆದರೆ, ಆ ಕಾಳಜಿ ಕೇಂದ್ರಗಳೇ ಗುಡ್ಡದ ತಪ್ಪಲಿನಲ್ಲಿರುವುದು ಇಲ್ಲಿನ ಸಮಸ್ಯೆ. ಅನೇಕ ಕಡೆ ಶಾಲೆಗಳ ಪಕ್ಕದಲ್ಲಿಯೇ ಗುಡ್ಡ ಕುಸಿದಿದೆ. ಶಾಲಾ ಆವರಣಕ್ಕೆ ನೀರು ನುಗ್ಗಿ ಸಮಸ್ಯೆಯಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡ ಕುಸಿತ ನಡೆದಿದೆ. ರೆಸಾರ್ಟ ನಿರ್ಮಾಣಕ್ಕಾಗಿ ಅನೇಕ ಕಡೆ ದೊಡ್ಡ ದೊಡ್ಡ ಬೆಟ್ಟಗಳನ್ನು ಅಗೆಯಲಾಗಿದೆ. ಹೆದ್ದಾರಿ ಅಗಲೀಕರಣ ನೆಪದಲ್ಲಿ ಅತ್ಯಂತ ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ತೆರೆಯಲಾಗಿದೆ. ಯಂತ್ರಗಳ ಸದ್ದಿಗೆ ಕಲ್ಬಂಡೆಗಳು ನೆಲಕ್ಕೆ ಅಪ್ಪಳಿಸುತ್ತಿದೆ. ದುಡ್ಡಿದ್ದವರು ಮಾಡಿದ ತಪ್ಪಿಗೆ ಅಮಾಯಕರು ಹಿಂಸೆ ಅನುಭವಿಸುತ್ತಿದ್ದಾರೆ.
ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಿರುವುದು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ. ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟ, ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ, ಅಂಕೋಲಾ ಬಳಿಯ ಶಿರೂರು ಗುಡ್ಡ, ಹೊನ್ನಾವರ ತಾಲೂಕಿನ ಮಲೆಮನೆ ಘಟ್ಟ, ಸಮೀಪದಲ್ಲಿರುವ ಭಾಸ್ಕೇರಿ ಹಾಗೂ ಅಪ್ಸರಕೊಂಡದಲ್ಲಿನ ರಸ್ತೆಗಳು ಈಗಲೂ ಕುಸಿತದ ಆತಂಕ ಎದುರಿಸುತ್ತಿವೆ. ಇದರೊಂದಿಗೆ ಯಲ್ಲಾಪುರ ತಾಲೂಕಿನ ಕಳಚೆ ಸೇರಿ ಹಲವು ಊರುಗಳು ಗುಡ್ಡ ಕುಸಿತದಿಂದ ನಲುಗಿದ್ದು, `ಮಳೆಗಾಲ ಮುಗಿದರೆ ಸಾಕು’ ಎನ್ನುವಷ್ಟರ ಮಟ್ಟಿಗೆ ಜನ ಹೆದರಿದ್ದಾರೆ.