ಉತ್ತರ ಕನ್ನಡ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೊಡಬೋಲೆ ಅವರು ಗುರುವಾರ ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚಾರ ನಡೆಸಿದ್ದಾರೆ. ಅಲ್ಲಿನ ಅವ್ಯವಸ್ಥೆ ನೋಡಿ ಅವರು ಮರುಕವ್ಯಕ್ತಪಡಿಸಿದ್ದಾರೆ.
ಅದಾದ ನಂತರ ಕಾರವಾರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸುಷ್ಮಾ ಗೊಡಬೋಲೆ ಅವರು ಹೆದ್ದಾರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. `ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿಯ ಮುಕ್ತಾಯಕ್ಕೆ ಜಿಲ್ಲಾಡಳಿತ ಸಾಕಷ್ಟು ಕಾಲವಕಾಶ ನೀಡಿದರೂ ಕೆಲಸ ಮುಗಿದಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಕೂಡಲೇ ಹೆಚ್ಚುವರಿ ಯಂತ್ರೋಪಕರಣ ತಂದು ಕೆಲಸವನ್ನು ಬೇಗ ಮುಗಿಸಬೇಕು. ಆ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಅವರು ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದರು.
ಎರಡೇ ದಿನದಲ್ಲಿ ಬೆಣ್ಣೆ ಹೊಳೆ ರಸ್ತೆ ರಿಪೇರಿ!
ಮಳೆಯ ಕಾರಣದಿಂದ ಬೆಣ್ಣೆಹೊಳೆ ಸೇತುವೆ ಬಳಿ ನಿರ್ಮಿಸಿದ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದೆ. ಸದ್ಯ ಶಾಲೆ ಆರಂಭವಾಗುವ ಕಾರಣ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ 2 ದಿನದಲ್ಲಿ ಈ ರಸ್ತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮರು ನಿರ್ಮಾಣ ಮಾಡಬೇಕು’ ಎಂದು ಅವರು ಸೂಚನೆ ನೀಡಿದರು. `ಹೆದ್ದಾರಿಗಳಲ್ಲಿ ನಿಗಧಿಗಿಂತ ಅಧಿಕ ಭಾರದ ಸರಕುಗಳನ್ನು ಹೊಂದಿರುವ ವಾಹನಗಳ ಸಂಚಾರದಿAದ ಸೇತುವೆಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ಅಂಥವನ್ನು ಜಿಲ್ಲೆಯ ಗಡಿಯಲ್ಲಿಯೇ ನಿಯಂತ್ರಿಸಬೇಕು’ ಎಂದು ಆದೇಶಿಸಿದರು.
`ಶಾಲೆಗಳ ಸುರಕ್ಷತೆಯ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಮೂಲಕ ಅವರ ಶಿಕ್ಷಣ ಮೊಟಕುಗೊಳ್ಳದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು. `ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನೀಡುವ ಪರಿಹಾರ ಕ್ರಮಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ರಾಷ್ಟಿಯ ಹೆದ್ದಾರಿಯ ಸೂಕ್ತ ಸ್ಥಳದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂನಾರಾಯಣ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಇತರರಿದ್ದರು.