`ನಾನು ದೇವರನ್ನು ಬಿಟ್ಟು ಬೇರೆ ಯಾರಿಗೂ ಹೆದರುವುದಿಲ್ಲ’ ಎಂದು ಕಾರವಾರ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ!
ಅಂಕೋಲಾದ ವಾಸರಕುದ್ರಿಗೆ ಗ್ರಾಮ ಪಂಚಾಯತ್ ನೂತನ ಕಟ್ಟಡ, ಅರಿವು ಕೇಂದ್ರ ಹಾಗೂ ಕಸವಿಲೇವಾರಿ ಘಟಕ ಉದ್ಘಾಟಿಸಿದ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ. `ಯಾರು ಎಷ್ಟೇ ಪೂಜೆ ಮಾಡಿದರೂ ದೇವರಿಗೆ ಕೇಳಿಸುವುದು ಸ್ವಚ್ಛ ಮನಸ್ಸಿನಿಂದ ಮಾಡಿದ ಪ್ರಾರ್ಥನೆ ಮಾತ್ರ. ದೇವಾನುದೇವತೆಗಳು ಸಹ ಅದನ್ನೇ ಅನುಗ್ರಹಿಸುತ್ತಾರೆ. ಹೀಗಾಗಿ ನಾನು ಹೆದರುವುದು ದೇವರಿಗೆ ಮಾತ್ರ’ ಎಂದು ಅವರು ನೆರೆದಿದ್ದ ಜನರ ಎದುರು ಹೇಳಿದ್ದಾರೆ.
`2017ರಲ್ಲಿ ನಾನು ಶಾಸಕನಾಗಿದ್ದಾಗ ಗ್ರಾಮ ಪಂಚಾಯತಗೆ ಅನುದಾನ ತಂದಿದ್ದೆ. ಆ ನಂತರ ಬಂದ ಸರ್ಕಾರ ದೇವರ ಭಜನೆ ಮಾತ್ರ ಮಾಡಿದ್ದು, ಅಭಿವೃದ್ಧಿ ಮಾಡಲಿಲ್ಲ. ಹೀಗಾಗಿ ಮತ್ತೆ ಶಾಸಕನಾದ ನಾನು ಆ ವೇಳೆ ತಂದ ಅನುಧಾನದಲ್ಲಿ ಆದ ಅಭಿವೃದ್ಧಿ ಕೆಲಸವನ್ನು ನಾನೇ ಉದ್ಘಾಟಿಸುತ್ತಿದ್ದು, ಆ ದೇವರೇ ನನ್ನ ಕೈಯಿಂದ ಲೋಕಾರ್ಪಣೆಗೊಳಿಸಿದ್ದಾನೆ’ ಎಂದರು. `ಕಾಂಗ್ರೆಸ್ ಸರ್ಕಾರದಲ್ಲಿ ಮಾತು ಕಡಿಮೆ. ಕೆಲಸ ಜಾಸ್ತಿ. ಹೀಗಾಗಿ ಕಳೆದ ಸಲದ ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಕಾಣಲಿಲ್ಲ’ ಎಂದರು.
`ಬಾಯಲ್ಲಿ ರಾಮ ನಾಮ ಹೇಳುತ್ತಿದ್ದ ಹಿಂದಿನ ಶಾಸಕರು ಜನರ ಕೆಲಸ ಮಾಡಲಿಲ್ಲ. ಶಾಸಕರ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ನಾನು ರಾಮನಲ್ಲಿ ಭಕ್ತಿ, ದೇವರಲ್ಲಿ ನಂಬಿಕೆ ಇದ್ದವನಾಗಿದ್ದೇನೆ. ಆದರೆ, ಕೆಲವರು ವಿಷ ಬೀಜ ಬಿತ್ತಲು ರಾಮನ ಹೆಸರು ಬಳಸಿಕೊಂಡು ರಹಿಮನ ಕೆಲಸ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.