ರೈತರು, ನಿರುದ್ಯೋಗಿಗಳು ಹಾಗೂ ವಿಕಲಚೇತನರಿಗೆ ವಿವಾಹ ಭಾಗ್ಯ ಕಲ್ಪಿಸಲು ಉತ್ತರ ಕನ್ನಡ ಜಿಲ್ಲಾಡಳಿತ `ಜೀವನ ಸಂಗಮ’ ಎಂಬ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಹಳ್ಳ ಹಿಡಿದಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಈ ಯೋಜನೆಯೇ ದಾಖಲೆಗಳಿಂದ `ಡಿಲಿಟ್’ ಆಗಿದೆ!
2024ರ ಜುಲೈ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ `ಜೀವನ ಸಂಗಮ’ ಎಂಬ ಯೋಜನೆಯನ್ನು ಜಾರಿಗೆ ತಂದಿತು. ಇನ್ನೂ ವಿವಾಹ ಆಗದವರು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟಿಗೆ ತೆರಳಿ ವಿವಾಹ ನೊಂದಣಿ ಮಾಡಿಕೊಂಡಲ್ಲಿ ಅವರಿಗೆ ತಕ್ಕ ಬಾಳ ಸಂಗಾತಿ ಆಯ್ಕೆ ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿತ್ತು. ಉತ್ತರ ಕನ್ನಡ ಜಿಲ್ಲೆಗೆ ಸೀಮಿತವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಯೋಜನೆಯ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕೃತ ಲೇಖನವನ್ನು ಪ್ರಸಾರ ಮಾಡಿತ್ತು. ವಿನೂತನ ಯೋಜನೆಯ ಬಗ್ಗೆ ಮಾಧ್ಯಮಗಳಲ್ಲಿ ಸಹ ಸಾಕಷ್ಟು ಪ್ರಚಾರ ಸಿಕ್ಕಿದ್ದರಿಂದ ಕಂಕಣ ಭಾಗ್ಯಕ್ಕಾಗಿ ಅನೇಕರು ನೊಂದಣಿ ಮಾಡಿಕೊಂಡಿದ್ದರು.

ಎಲ್ಲವೂ ಅಂದುಕೊoಡ0ತೆ ನಡೆದರೆ, ಅರ್ಜಿ ಸಲ್ಲಿಸಿದವರ ಪೂರ್ವಾಪರದ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಬೇಕಿತ್ತು. ಕಂದಾಯ ನಿರೀಕ್ಷಕರು ಅರ್ಜಿದಾರರ ಮನೆಗೆ ತೆರಳಿ ಯೋಜನೆ ಯಶಸ್ಸಿಗೆ ಶ್ರಮಿಸಬೇಕಿತ್ತು. ಮುಜುರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಈ ಸಾಮೂಹಿಕ ವಿವಾಹ ನಡೆಯಬೇಕಿತ್ತು. ನಿಯಮಾನುಸಾರ ವಿವಾಹ ಆದವರಿಗೆ ಸರ್ಕಾರದಿಂದಲೇ ಬಂಗಾರದ ತಾಳಿ ಕೊಡಬೇಕಿತ್ತು. ಆದರೆ, ಈಚೆಗೆ ನಡೆದ ಸಾಮೂಹಿಕ ವಿವಾಹದಲ್ಲಿಯೂ ಜೀವನ ಸಂಗಮ ಯೋಜನೆಯ ಅಭ್ಯರ್ಥಿಗಳು ಕಾಣಲಿಲ್ಲ. ಯೋಜನೆ ಜಾರಿಯಾಗಿ ವರ್ಷ ಸಮೀಪಿಸಿದರೂ ಜಿಲ್ಲಾಡಳಿತದಿಂದ ಒಂದೇ ಒಂದು ವಿವಾಹ ಕಾರ್ಯ ಸಹ ನಡೆದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿದಾಗ `ಈ ಕಚೇರಿಯಿಂದ ಕಾರ್ಯಗೊಳಿಸಿದ ಲಿಖಿತ ಆದೇಶ ಇಲ್ಲ’ ಎಂಬ ಉತ್ತರ ಬಂದಿದೆ.

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಗಂಗುಬಾಯಿ ಮಾನೇಕರ್ ಅವರು ಈ ಯೋಜನೆ ರೂಪಿಸಿದ್ದು, ಅವರು ಇಲ್ಲಿಂದ ವರ್ಗವಾದ ಮರುದಿನವೇ `ಜೀವನ ಸಂಗಮ’ ಯೋಜನೆಯೂ ನೆನೆಗುದಿಗೆ ಬಿದ್ದಿದೆ. ಜೀವನ ಸಂಗಮ ಯೋಜನೆಯ ರೂಪುರೇಷೆಗಳ ಪ್ರಕಾರ ಅರ್ಜಿ ಸಲ್ಲಿಸಿದವರ ಪೂರ್ವಾಪರ ವಿಚಾರಣೆ ನಡೆದಿಲ್ಲ. ಅವರಿಗೆ ಹೊಂದಾಣಿಕೆಯಾಗಬಹುದಾದ ಸಂಗಾತಿಯ ಹುಡುಕಾಟವೂ ಆಗಿಲ್ಲ. ಹೀಗಾಗಿ ಸರ್ಕಾರಿ ಯೋಜನೆ ಅಡಿ ವಿವಾಹಕ್ಕಾಗಿ ನೊಂದಣಿ ಮಾಡಿಕೊಂಡವರು ಈಗಲೂ ಬಾಳ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ, ಮದುವೆ ಆಗಿಲ್ಲ ಎಂಬ ಕಾರಣದಿಂದ ಆತ್ಮಹತ್ಯೆಗೆ ಶರಣಾದವರು ಸಹ ಜಿಲ್ಲೆಯಲ್ಲಿದ್ದಾರೆ.