ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿ ಇನ್ಮುಂದೆ ಭಾನುವಾರವೂ ತೆರೆದಿರಲಿದೆ. 2 ಹಾಗೂ 4ನೇ ಶನಿವಾರದ ದಿನ ಸಹ ಈ ಕಚೇರಿಗೆ ರಜೆ ಇಲ್ಲ!
ಸರ್ಕಾರದ ಆದಾಯ ವೃದ್ಧಿಸುವಲ್ಲಿ ಉಪನೋಂದಣಿ ಕಚೇರಿ ಕೊಡುಗೆ ದೊಡ್ಡದು. ಉಪನೋಂದಣಿ ಕಚೇರಿಯಲ್ಲಿನ ಭ್ರಷ್ಟಾಚಾರ ಆರೋಪಗಳು ಕಡಿಮೆ ಇಲ್ಲ. ಭೂ ನೋಂದಣಿ, ವಿವಾಹ ನೋಂದಣಿ ಸೇರಿ ಹಲವು ಬಗೆಯ ಕೆಲಸಗಳಿಗಾಗಿ ನಿತ್ಯ ಇಲ್ಲಿ ಜನ ಬರುತ್ತಾರೆ. ಸರ್ಕಾರಿ ಶುಲ್ಕ ಪಾವತಿಸಿ, ಪಾಳಿಯಲ್ಲಿ ನಿಂತರೂ ಒಂದೇ ದಿನದಲ್ಲಿ ಕೆಲಸ ಮುಗಿದರೆ ಅದು ಅವರ ಪುಣ್ಯ!
ಉಪನೋಂದಣಿ ಕಚೇರಿಗೆ ಆಗಮಿಸುವ ಜನ ಕೆಲಸ ಆಗದೇ ಪರದಾಡುವುದನ್ನು ಗಮನಿಸಿದ ಸರ್ಕಾರ ರಜಾ ದಿನಗಳಲ್ಲಿ ಸಹ ಕಚೇರಿ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ. ರಾಜ್ಯದ ಪ್ರತಿಯೊಂದು ಉಪನೋಂದಣಿ ಕಚೇರಿಗೂ ಈ ನಿಯಮ ಅನ್ವಯವಾಗಲಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೂ ಹೆಚ್ಚಿನ ಆದಾಯ ಬರುವ ನಿರೀಕ್ಷೆಯಿದೆ.
ಭಾನುವಾರ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಕಚೇರಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಮೇ 23ರಂದು ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಆ ಆದೇಶ ಜಾರಿಗೆ ಬಂದಿದೆ. ಅದರಂತೆ ಜೂ 8ರ ಭಾನುವಾರ ಉಪನೋಂದಣಿ ಕಚೇರಿ ಸೇವೆಗೆ ಸಿಗಲಿದ್ದು, ಜೂ 10ರಂದು ರಜೆ ನೀಡಲಾಗಿದೆ.