ಸರ್ಕಾರಿ ಯೋಜನೆಗಳ ಸಬ್ಸಿಡಿ ಹಣ ಸಮಯಕ್ಕೆ ಸರಿಯಾಗಿ ರೈತರ ಖಾತೆಗೆ ಜಮಾ ಆಗದ ಪರಿಣಾಮ ಸರ್ಕಾರಿ ಅಧಿಕಾರಿಗಳು ಮುಜುಗರ ಅನುಭವಿಸುತ್ತಿದ್ದಾರೆ. ಯಲ್ಲಾಪುರದಲ್ಲಿ ನಡೆದ `ನೈಸರ್ಗಿಕ ಕೃಷಿ ಅರಿವು ಕಾರ್ಯಕ್ರಮ’ದಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ಕಾರ್ಯಕ್ರಮ ಉದ್ಘಾಟಕರೇ ತಮ್ಮ ಭಾಷಣದಲ್ಲಿ ಸರ್ಕಾರದ ನೀತಿಯ ವಿರುದ್ಧ ಅಸಮಧಾನವ್ಯಕ್ತಪಡಿಸಿದರು.
ಮಂಗಳವಾರ ಯಲ್ಲಾಪುರದ ಉಪಳೇಶ್ವರದಲ್ಲಿನ ಗ್ರಾ ಪಂ ಸಭಾಭವನದಲ್ಲಿ ಕೃಷಿ ವಿಕಸಿತ ಅಭಿಯಾನ ಹಾಗೂ ನೈಸರ್ಗಿಕ ಕೃಷಿ ಅರಿವು ಕಾರ್ಯಕ್ರಮ ನಡೆಯಿತು. ಉತ್ತರ ಕನ್ನಡ ಜಿಲ್ಲಾ ಪಂಚಾಯತ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಈ ಕಾರ್ಯಾಗಾರ ಆಯೋಜಿಸಿದ್ದು, ಗ್ರಾ ಪಂ ಸದಸ್ಯ ಸುಬ್ಬಣ್ಣ ಉದ್ದಾಬೈಲ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ಸರ್ಕಾರ ಬದಲಾದ ಹಾಗೇ ಯೋಜನೆಗಳು ಸಹ ಬದಲಾಗುತ್ತದೆ. ತೋಟಗಾರಿಕಾ ಇಲಾಖೆ ನೀಡಬೇಕಿದ್ದ ಹನಿ ನೀರಾವರಿ ಸಹಾಯಧನ 2 ವರ್ಷ ಕಳೆದರೂ ರೈತರಿಗೆ ಜಮಾ ಆಗಿಲ್ಲ’ ಎನ್ನುವ ವಿಷಯ ಪ್ರಸ್ತಾಪಿಸಿದ್ದಾರೆ.
`ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಆದರೂ ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತಿಲ್ಲ’ ಎಂದು ಸುಬ್ಬಣ್ಣ ಉದಾಬೈಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. `ಹೀಗಾಗಿ ಇಂಥ ಕಾರ್ಯಕ್ರಮಗಳ ಮೇಲೆ ರೈತರು ವಿಶ್ವಾಸಕಳೆದುಕೊಂಡಿದ್ದಾರೆ. ರೈತರ ವಿಶ್ವಾಸಗಳಿಸಲು ಸರ್ಕಾರ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆ ಅದನ್ನು ಮುಂದುವರೆಸಬೇಕು’ ಎಂದವರು ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಈ ಮಾತಿಗೆ ವೇದಿಕೆಯಲ್ಲಿದ್ದವರ ಜೊತೆ ನೆರೆದಿದ್ದ ರೈತರು ತಲೆಯಾಡಿಸಿದ್ದು, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿ ಎಸ್ ಭಟ್ಟ ಕಾರೆಮನೆ ಅವರು ಇದಕ್ಕೆ ಧ್ವನಿಗೂಡಿಸಿದರು.
ಕೃಷಿ ಇಲಾಖೆ ಉಪನಿರ್ದೇಶಕಿ ಪ್ರತಿಭಾ ಹೂಗಾರ್, ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಕಾರ್ಯಕ್ರಮದಲ್ಲಿದ್ದರು. ಕೃಷಿ ಸಖಿ ಶ್ರೀಲತಾ ಜಂಬೆಸಾಲ್ ಸಂಘಟಿಸಿದ್ದರು.