ಹೊನ್ನಾವರದಲ್ಲಿ ಪರಿಸರಕ್ಕೆ ಹಾನಿ ಆಗುವ ರೀತಿ ನದಿಯಿಂದ ಮರಳು ತೆಗೆಯುವುದರ ಜೊತೆ ಸರ್ಕಾರಕ್ಕೆ ವಂಚಿಸಿ ಮರಳು ಮಾರಾಟಕ್ಕೆ ಯತ್ನಿಸಿದ್ದ ಮತ್ತೆ ಆರು ಜನರ ವಿರುದ್ಧ ಶಿರಸಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಜೂನ್ 10ರ ಸಂಜೆ ಪಿಎಸ್‌ಐ ನಾಗಪ್ಪ ಬಿ ಅವರು ಎರಡು ಲಾರಿಗಳಲ್ಲಿನ ಮರಳು ವಶಕ್ಕೆಪಡೆದಿದ್ದರು. ಅದರ ಬೆನ್ನಲ್ಲೇ ಅದೇ ದಿನ ಪಿಎಸ್‌ಐ ರತ್ನಾ ಕುರಿ ಅವರು ಮೂರು ಲಾರಿ ಮರಳು ವಶಕ್ಕೆಪಡೆದಿದ್ದಾರೆ. ಹೊನ್ನಾವರ ಜಲವಳ್ಳಿಯ ಗಜಾನನ ನಾಯ್ಕ, ಹೊನ್ನಾವರ ಕರ್ವ ನಾತಗೇರಿಯ ಶಿವನಾಗ ನಾಯ್ಕ, ಹೊನ್ನಾವರ ಮಾವಿನಹೊಳೆಯ ಪ್ರಮೋದ ನಾಯ್ಕ, ಹೊನ್ನಾವರ ಗುಣವಂತೆ ಮೊಗ್ಲಿಯ ಆನಂದ ನಾಯ್ಕ, ಹೊನ್ನಾವರ ಸುರಕಟ್ಟಾ ಕವಲಕ್ಕಿಯ ಮಂಜುನಾಥ ಗೌಡ ಹಾಗೂ ಹೊನ್ನಾವರ ಮಾವಿನಕೂರ್ವೆಯ ರವೀಂದ್ರ ಗೌಡ ಸರ್ಕಾರಕ್ಕೆ ಮೋಸ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ.
ಸಿಕ್ಕಿ ಬಿದ್ದ ಎಲ್ಲರೂ ಲಾರಿ ಚಾಲಕ ಹಾಗೂ ಮಾಲಕರಾಗಿದ್ದು, ಸರ್ಕಾರದ ಮರಳು ನೀತಿಯನ್ನು ಉಲ್ಲಂಘಿಸಿದ ಆರೋಪದ ಅಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಅವರು ಮರಳುಗಾರಿಕೆ ನಡೆಸಿದ್ದರಿಂದ ಪರಿಸರಕ್ಕೆ ಹಾನಿಯಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದರೊಂದಿಗೆ ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೇ ಸರ್ಕಾರಿ ಸ್ವತ್ತಾದ ಮರಳು ಕದ್ದ ಆರೋಪ ಈ ಎಲ್ಲರ ಮೇಲಿದೆ.
ಈ ಲಾರಿಯಲ್ಲಿದ್ದ 12 ಬರಾಸ್ ಮರಳಿನ ಮೌಲ್ಯ 30 ಸಾವಿರ ರೂ ಎಂದು ಪೊಲೀಸರು ಅಂದಾಜಿಸಿದ್ದಾರೆ. ಆರೋಪಿತರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.