ರಾಜ್ಯದ ಎಲ್ಲಾ ಶಾಸಕರಿಗೂ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಶಾಸಕರಿಗಾಗಿಯೇ ಪ್ರತ್ಯೇಕ ಆಸನವನ್ನು ಮೀಸಲಿರಿಸಿದೆ. ಆದರೆ, ಐಷಾರಾಮಿ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುವ ಈ ಜನಪ್ರತಿನಿಧಿಗಳು ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸುವುದು ತೀರಾ ಅಪರೂಪ. ಈ ನಡುವೆ ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸಿ ಸರ್ಕಾರ ನೀಡಿದ ಸೌಲಭ್ಯದ ಪ್ರಯೋಜನಪಡೆದಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣ ಬಳಿಯ ಅಶೋಕೆ ಗ್ರಾಮಕ್ಕೆ ಈವರೆಗೂ ಬಸ್ ಸೌಕರ್ಯ ಇಲ್ಲ. ವಾರದ ಹಿಂದೆ ಈ ಬಗ್ಗೆ ಅಶೋಕೆಯ ಜನ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದು, ಮನವಿ ಆಳಿಸಿದ ದಿನಕರ ಶೆಟ್ಟಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜೊತೆ ಬಸ್ಸು ಏರಿದರು. ಗೋಕರ್ಣದಿಂದ ಅಶೋಕೆಯವರೆಗೂ ಬಸ್ಸಿನಲ್ಲಿ ಚಲಿಸಿ, ಅದೇ ಬಸ್ಸಿನಲ್ಲಿ ಮರಳಿದರು. ಈ ವೇಳೆ ಜನರ ಸಮಸ್ಯೆಗಳನ್ನು ಆಲಿಸಿದ ದಿನಕರ ಶೆಟ್ಟಿ `ಶೀಘ್ರದಲ್ಲಿಯೇ ಈ ಮಾರ್ಗದಲ್ಲಿ ಬಸ್ ಬಿಡುವ ವ್ಯವಸ್ಥೆ ಮಾಡುವೆ’ ಎಂಬ ಭರವಸೆ ನೀಡಿದರು. ನಿಗದಮ ಅಧಿಕಾರಿಗಳ ಜೊತೆಯೂ ಬಸ್ಸಿನ ವೇಳಾಪಟ್ಟಿ ಹಾಗೂ ಬಸ್ಸು ಬಿಡುವ ತಯಾರಿ ಬಗ್ಗೆ ಚರ್ಚಿಸಿದರು. ದಿನಕರ ಶೆಟ್ಟಿ ಅವರು ಬೆಂಗಳೂರಿಗೆ ಹೋಗುವಾಗ ಸಹ ಹೆಚ್ಚಿನದಾಗಿ ಕಾರವಾರ-ಬೆಂಗಳೂರು ಮಾರ್ಗದ ಬಸ್ಸು ಬಳಸುತ್ತಾರೆ ಎಂಬುದು ವಿಶೇಷ.
ಇನ್ನೂ ಯಲ್ಲಾಪುರದ ಕರಡೊಳ್ಳಿ ಭಾಗಕ್ಕೆ ಸಹ ಬಸ್ ಸಂಪರ್ಕ ಸರಿಯಾಗಿರಲಿಲ್ಲ. ಕರಡೊಳ್ಳಿಯಲ್ಲಿ ಕರಡಿ ಸಂಚಾರದ ಆತಂಕವಿರುವ ಕಾರಣ ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಶಾಲೆಗೆ ಹೋಗಲು ಸಹ ಬಸ್ ವ್ಯವಸ್ಥೆ ಇಲ್ಲದ ಬಗ್ಗೆ ಅಲ್ಲಿನವರು ಶಾಸಕ ಶಿವರಾಮ ಹೆಬ್ಬಾರ್ ಗಮನಕ್ಕೆ ತಂದಿದ್ದರು. ಆ ಭಾಗದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿರುವುದನ್ನು ಅರಿತ ಶಿವರಾಮ ಹೆಬ್ಬಾರ್ ಸಾರಿಗೆ ನಿಗಮದ ಅಧಿಕಾರಿಗಳ ಜೊತೆ ಮಾತನಾಡಿದರು. ಬೇಡಿಕೆಗೆ ಅನುಗುಣವಾಗಿ ನಿತ್ಯ ಯಲ್ಲಾಪುರ ಪಟ್ಟಣಕ್ಕೆ ಬಿಸ್ ಬಿಡಿಸಿದರು. ಬಸ್ ಉದ್ಘಾಟನೆಗಾಗಿ ಸೋಮವಾರ ಕರಡೊಳ್ಳಿಗೆ ಹೋಗಿದ್ದ ಅವರು ವಿದ್ಯಾರ್ಥಿಗಳ ಜೊತೆ ಅದೇ ಬಸ್ಸಿನಲ್ಲಿ ಯಲ್ಲಾಪುರಕ್ಕೆ ಬಂದರು. 17ಕಿಮೀ ದೂರದವರೆಗೆ ಅವರು ಬಸ್ಸಿನಲ್ಲಿ ಸಾಗಿದರು. ಈ ಹಿಂದೆ ಮಳೆ ಪ್ರವಾಹದ ವೇಳೆಯಲ್ಲಿಯೂ ಶಿವರಾಮ ಹೆಬ್ಬಾರ್ ಸರ್ಕಾರಿ ಬಸ್ಸು ಏರಿ ಚಾಲಕರ ಪಕ್ಕ ಕುಳಿತು ಬಸ್ ಓಡಿಸಲು ಚಾಲಕರಿಗೆ ಧೈರ್ಯ ಹೇಳಿದ್ದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಬಸ್ ಇಲ್ಲದ ಗ್ರಾಮಕ್ಕೆ ಬಸ್ಸು ಕೊಂಡೊಯ್ದ ಕಾರಣ ಗೋಕರ್ಣದಿಂದ ಅಶೋಕೆ ಭಾಗಕ್ಕೆ ಬಸ್ ಓಡಾಟ ಶುರುವಾಗುವ ನಿರೀಕ್ಷೆಯಿದ್ದು, ಇದು ಆ ಭಾಗದ ಜನರಿಗೆ ನೆರವಾಗಲಿದೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸರ್ಕಾರಿ ಬಸ್ಸು ಏರಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದರಿಂದ ಆ ಭಾಗದ ಇನ್ನಷ್ಟು ಸಮಸ್ಯೆಗಳು ಬಗೆಹರಿಯುವ ನಿರೀಕ್ಷೆಯಿದೆ.