`ಇಲ್ಲೊಂದು ಕೊಲೆ ನಡೆದಿದೆ. ಶವವನ್ನು ನದಿಯಲ್ಲಿ ಎಸೆದಿದ್ದಾರೆ’ ಎಂದು ಸರ್ಕಾರಿ ಸಹಾಯವಾಣಿಗೆ ಫೋನ್ ಬಂದಿದ್ದು, ಕಂದಾಯ ಅಧಿಕಾರಿಗಳ ಜೊತೆ ಪೊಲೀಸರು ಶವ ಹುಡುಕಾಟ ನಡೆಸಿದರು. ಆದರೆ, ಅಲ್ಲಿ ಶವವೂ ಸಿಗಲಿಲ್ಲ.. ಫೋನ್ ಮಾಡಿದ ವ್ಯಕ್ತಿಯೂ ಇರಲಿಲ್ಲ!
ಭಟ್ಕಳದ ಸರ್ಕಾರಿ ಸಹಾಯವಾಣಿಗೆ ಅಪರಿಚಿತ ವ್ಯಕ್ತಿಯೊಬ್ಬರು ಫೋನ್ ಮಾಡಿ ಕೊಲೆ ಮಾಹಿತಿ ನೀಡಿದ್ದಾರೆ. `ವೆಂಕಟಾಪುರ ನದಿಯಲ್ಲಿ ಶವ ತೇಲುತ್ತಿದೆ’ ಎಂದು ಆತ ಹೇಳಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಅಲ್ಲಿ ದೌಡಾಯಿಸಿದ್ದಾರೆ. ಗಾಬರಿಯಿಂದ ಎಲ್ಲಾ ಕಡೆ ಶೋಧ ಕಾರ್ಯ ನಡೆಸಿದ್ದಾರೆ. ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಹಾಗೂ 112 ವಾಹನದ ಪೊಲೀಸ್ ಸಿಬ್ಬಂದಿ ತಾಸುಗಳ ಕಾಲ ನದಿಯಲ್ಲಿ ಹುಡುಕಾಟ ಮಾಡಿದ್ದಾರೆ. ಆದರೆ, ಅಲ್ಲಿ ಯಾವ ಕೊಲೆಯೂ ನಡೆದಿಲ್ಲ. ಶವವೂ ಸಿಗಲಿಲ್ಲ. ಗ್ರಾಮದ ಜನ ಸಹ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಿದ್ದು, ಕೊನೆಗೆ ಯಾವ ಕೊಲೆಯೂ ನಡೆದಿಲ್ಲ ಎಂದು ಅರಿತು ನಿಟ್ಟುಸಿರು ಬಿಟ್ಟಿದ್ದಾರೆ.
ಫೋನ್ ಮಾಡಿದ ವ್ಯಕ್ತಿಗೆ ಮತ್ತೆ ಅಧಿಕಾರಿಗಳು ಫೋನ್ ಮಾಡಿದಾಗ ಸಂಪರ್ಕ ಸಾಧ್ಯವಾಗಿಲ್ಲ. ಆತ ತನ್ನ ಹೆಸರು-ವಿವರವನ್ನು ಸಹ ಹೇಳಿಲ್ಲ. ಯಾವ ಉದ್ದೇಶಕ್ಕೆ ಆತ ಹಾಗೇ ಮಾಡಿದ ಎಂದು ಸಹ ಗೊತ್ತಾಗಿಲ್ಲ. ಸದ್ಯ ಸುಳ್ಳು ಹೇಳಿ ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಯಾಮಾರಿಸಿದವನಿಗಾಗಿ ಹುಡುಕಾಟ ನಡೆದಿದೆ. ಆತ ಸಿಕ್ಕಿದ ನಂತರ ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.