ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರ ಜೊತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸಭೆ ನಡೆಸಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಲವು ಕ್ರಮ ಜರುಗಿಸಿದರು.
`ಹಳಿಯಾಳದ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಒಳಭಾಗದಲ್ಲಿ ಕಬ್ಬು ತೂಕ ಮಾಡುವ ಯಂತ್ರವನ್ನು ಅಳವಡಿಸಲಾಗಿದೆ. ಇದರಿಂದಾಗಿ ಕಬ್ಬಿನ ತೂಕದ ಪ್ರಮಾಣದ ಪ್ರತಿ ಬಾರಿ ಗೊಂದಲವಾಗುತ್ತಿದೆ’ ಎಂದು ರೈತರು ಹೇಳಿದರು. ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸುವಂತೆ ಕಬ್ಬು ಬೆಳೆಗಾರರು ಕೇಳಿಕೊಂಡಿದ್ದು, `ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸಲು ಸ್ಥಳವಿಲ್ಲ’ ಎಂದು ಕಾರ್ಖಾನೆ ಅಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ `ಸ್ಥಳಾವಕಾಶದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ’ ಎಂದು ಕಂದಾಯ, ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
`ಕಬ್ಬು ಅರೆಯುವ ಹಂಗಾಮು ಪ್ರಾರಂಭದಿoದ ಮುಕ್ತಾಯದವರೆಗಿನ ಸಕ್ಕರೆ ಇಳುವರಿ ಕುರಿತಂತೆ ವಿವಿಧ ತಂಡಗಳಿAದ ತಪಾಸಣೆ ನಡೆಸಲಾಗಿದೆ. ಈ ಕುರಿತಂತೆ ಯಾವುದೂ ದೂರುಗಳು ಬಂದಿಲ್ಲ. ತೂಕ ಮತ್ತು ಅಳತೆ ಇಲಾಖೆಯಿಂದ ಸಕ್ಕರೆ ಕಾರ್ಖಾನೆಯ ತೂಕ ಯಂತ್ರದ ತಪಾಸಣೆ ನಡೆಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. `ಕಳೆದ ಸಾಲಿನ ಕಬ್ಬಿನ ಉಪಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದ ಬಗ್ಗೆ ವಿವರಗಳನ್ನು ಸಲ್ಲಿಸಿ’ ಎಂದು ಡೀಸಿ ಸೂಚಿಸಿದರು. `ಕಾರ್ಖಾನೆಯ ನೀರು ರೈತರ ಜಮೀನುಗಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಪರಿಸರ ಮಾಲಿನ್ಯಕ್ಕೆ ಆಸ್ಪದ ಕೊಡಬಾರದು’ ಎಂದು ಪರಿಸರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
`ಕಬ್ಬು ಕಟಾವಿನ ಕುರಿತ ಲಗಾಣಿಯಲ್ಲಿ ಯಾವುದೇ ದೂರುಗಳು ಬಂದಲ್ಲಿ ಸಂಬAಧಪಟ್ಟವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಪೊಲೀಸರಿಗೆ ಸೂಚಿಸಿದರು. ವಿದ್ಯುತ್ ಅವಘಡದಿಂದ 43 ಗ್ರಾಮಗಳಲ್ಲಿ 1278 ಟನ್ ಕಬ್ಬು ಹಾಳಾಗಿದ್ದು ಈ ಬಗ್ಗೆ ಹೆಸ್ಕಾಂ ವರದಿ ನೀಡಬೇಕು’ ಎಂದರು. ಸಭೆಯಲ್ಲಿ ಕಬ್ಬು ಸಾಗಾಣಿಕೆ ವೆಚ್ಚ ಪಾವತಿ ಬಗ್ಗೆ ಚರ್ಚೆ ನಡೆಯಿತು. ದಾಂಡೇಲಿ ಭಾಗದಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದ್ದು ವನ್ಯಜೀವಿ ನಿಯಂತ್ರಣ ಹಾಗೂ ಹಾನಿಗೆ ಪರಿಹಾರದ ಬಗ್ಗೆ ಕಬ್ಬು ಬೆಳೆಗಾರರು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಕಬ್ಬು ಬೆಳಗಾರರ ಸಂಘದ ಪ್ರತಿನಿಧಿಗಳು ಮತ್ತು ಕಬ್ಬು ಬೆಳಗಾರರು ಉಪಸ್ಥಿತರಿದ್ದರು.