ಕಂದಾಯ ಇಲಾಖೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರಿಗೆ ಪತ್ರ ಬರೆದಿದ್ದಾರೆ.
`ಜಮೀನು ಹಕ್ಕು ಬದಲಾವಣೆ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ವಾರಸಾ ಹಾಗೂ ಪೌತಿ ಖಾತೆ ಮಾಡಿಸಿಕೊಳ್ಳಲು ಜನ ಅಲೆದಾಡುತ್ತಿದ್ದಾರೆ’ ಎಂಬ ವಿಷಯವನ್ನು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ವಿವರಿಸಿದ್ದಾರೆ. `ತಹಶೀಲ್ದಾರ್ ಕಚೇರಿಯಲ್ಲಿ ಈ ಬಗ್ಗೆ ಅರ್ಜಿಪಡೆಯುತ್ತಿಲ್ಲ. ಗ್ರಾಮ ಪಂಚಾಯತ ಕಚೇರಿಯವರಿಗೂ ಮಾಹಿತಿ ಇಲ್ಲ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರಶ್ನಿಸಿದರೂ ಉತ್ತರ ಸಿಗುತ್ತಿಲ್ಲ’ ಎಂದವರು ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ.
`ಖಾತೆ ಬದಲಾವಣೆ ಸಮಸ್ಯೆಯಿಂದ ರೈತರಿಗೆ ತೊಂದರೆಯಾಗಿದೆ. ಬಡವರು ಕಚೇರಿಯಿಂದ ಕಚೇರಿಗೆ ಅನಗತ್ಯ ಅಲೆದಾಟ ನಡೆಸುತ್ತಿದ್ದಾರೆ. ಪೌತಿ ಖಾತೆ ಮಾಡಲು ಸರ್ಕಾರ ಇನ್ನೂ ಆಫ್ ಬಿಡುಗಡೆ ಮಾಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಭೂಮಿ ಮೇಲೆ ಸಾಲ ಮಾಡಿ ಮಕ್ಕಳ ಮದುವೆ, ಮನೆ ನಿರ್ಮಾಣ ಸೇರಿ ವಿವಿಧ ಕೆಲಸ ಮಾಡಿಕೊಳ್ಳುವವರಿಗೆ ಇದರಿಂದ ಸಮಸ್ಯೆಯಾಗಿದೆ’ ಎಂದವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆ ಭಾಗದ ರೈತರಾದ ಗಣಪತಿ ಪಟಗಾರ, ಸುನೀಲ್ ಪಟಗಾರ, ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ನಿವೃತ್ತ ಅಧಿಕಾರಿ ನಾಗೇಶ ಹುಲಸ್ವಾರ್ ಇತರರು ಇದಕ್ಕೆ ಧ್ವನಿಗೂಡಿಸಿದ್ದಾರೆ.