ಸಮುದ್ರದಲ್ಲಿ ಮುಳುಗಿದ ದೋಣಿಗೆ ವಿಮಾ ಪರಿಹಾರ ನೀಡಲು ಮೀನಾಮೇಷ ಏಣಿಸಿದ ವಿಮಾ ಕಂಪನಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 43 ಲಕ್ಷ ರೂ ದಂಡ ವಿಧಿಸಿದೆ. ಜೊತೆಗೆ ಶೇ 9ರ ಲೆಕ್ಕಾಚಾರದಲ್ಲಿ ಬಡ್ಡಿ ಪಾವತಿಸುವಂತೆಯೂ ಆದೇಶಿಸಿದೆ.
ಅಂಕೋಲಾ ತಾಲೂಕಿನ ಮಂಜುಗುಣಿಯ ಉಲ್ಲಾಸ ದತ್ತಾ ತಾಂಡೇಲ ಅವರು ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದರು. ತಮ್ಮ ಬೋಟಿಗೆ ಅವರು ವಿಮೆಯನ್ನು ಮಾಡಿಸಿದ್ದರು. ವಿಮಾ ಕಂಪನಿಗೆ ಅವರು 1,32,083ರೂ ಪಾವತಿಸಿದ್ದರು. ಮೀನುಗಾರಿಗೆಗೆ ತೆರಳಿದಾಗ ಅವರ ಮೀನು ಸಮುದ್ರದಲ್ಲಿ ಮುಳುಗಿದ್ದು, ಎಲ್ಲಾ ದಾಖಲೆ ಸರಿಯಿದ್ದರೂ ವಿಮಾ ಪರಿಹಾರ ಪಾವತಿಸಲು ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಒಪ್ಪಿರಲಿಲ್ಲ.
ಸರ್ವೇಯರ್ ವರದಿ ಆಧಾರದಲ್ಲಿ ವಿಮಾ ಪರಿಹಾರ ನೀಡುವಂತೆ ಮೀನುಗಾರ ಉಲ್ಲಾಸ ತಾಂಡೇಲ ಮನವಿ ಮಾಡಿದರೂ ಅದಕ್ಕೆ ಕಂಪನಿ ಒಪ್ಪಿರಲಿಲ್ಲ. ಹೀಗಾಗಿ ಅವರು ಗ್ರಾಹಕ ವೇದಿಕೆಯ ಮೊರೆ ಹೋಗಿದ್ದರು. ಮೀನುಗಾರನ ಅಳಲು ಆಲಿಸಿದ ಆಯೋಗದ ಪ್ರಭಾರ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಹಾಗೂ ಸದಸ್ಯ ನೈನಾ ಕಾಮಟೆ ಅವರು ವಿಮಾ ಕಂಪನಿಯನ್ನು ತರಾಠೆಗೆ ತೆಗೆದುಕೊಂಡರು. ದೂರಿನ ವಿಚಾರಣೆ ನಡೆಸಿದ ಅವರು ಸಂಪೂರ್ಣ ವಿಮಾ ಮೊತ್ತ ಪಾವತಿಗೆ ಆದೇಶಿಸಿದರು.
40ಲಕ್ಷ ರೂಪಾಯಿ ಪರಿಹಾರವನ್ನು ಶೇ 9ರ ಬಡ್ಡಿದರದೊಂದಿಗೆ ಮೀನುಗಾರನಿಗೆ ಪಾವತಿಸಬೇಕು. ಜೊತೆಗೆ ಪರಿಹಾರ ರೂಪದಲ್ಲಿ 3 ಲಕ್ಷ ರೂ ಹಾಗೂ ದೂರುದಾರ ಮಾಡಿದ ವೆಚ್ಚಕ್ಕಾಗಿ 10 ಸಾವಿರ ರೂ ಪಾವತಿಸಬೇಕು’ ಎಂದು ಆದೇಶಿಸಿದರು. ಮೀನುಗಾರನ ಪರವಾಗಿ ನ್ಯಾಯವಾದಿ ನಾಗಾನಂದ ಬಂಟ ವಾದ ಮಂಡಿಸಿದ್ದರು.