ಕೊಡ್ಲಗದ್ದೆಯ ಮನೋಹರ ಹೆಗಡೆ ಅವರಿಗೆ ಮೋಸ ಮಾಡಿದ್ದ ಮಲ್ಲಿಕಾರ್ಜುನ ಟ್ರಾವೆಲ್’ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. `30 ಸಾವಿರ ರೂ ಪರಿಹಾರದ ಜೊತೆ ಮನೋಹರ ಹೆಗಡೆ ಅವರು ಮುಂಗಡವಾಗಿ ಪಾವತಿಸಿದ್ದ 40 ಸಾವಿರ ರೂ ಹಣಕ್ಕೆ ಶೇ 12ರ ಬಡ್ಡಿ ವಿಧಿಸಿ ಮರುಪಾವತಿ ಮಾಡಬೇಕು’ ಎಂದು ನ್ಯಾಯಾಲಯ ಆದೇಶಿಸಿದೆ.
ಯಲ್ಲಾಪುರದ ಕೊಡ್ಲಗದ್ದೆಯ ಮನೋಹರ ರಾಮಕೃಷ್ಣ ಹೆಗಡೆ ಅವರು ಕಾಶಿ ಹಾಗೂ ಅಯೋಧ್ಯೆ ಪ್ರವಾಸಕ್ಕೆ ನಿರ್ಧರಿಸಿದ್ದರು. ಇದಕ್ಕಾಗಿ ಅವರು ಮಲ್ಲಿಕಾರ್ಜುನ ಟ್ರಾವೆಲ್ಸ್ ಏಜೆನ್ಸಿಯನ್ನು ಸಂಪರ್ಕಿಸಿದ್ದರು. 60 ಸಾವಿರ ರೂ ಹಣ ನೀಡಿ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದರು. ಆದರೆ, ಅನಾರೋಗ್ಯದ ಕಾರಣ ಅವರಿಗೆ ಕಾಶಿ ಯಾತ್ರೆ ಸಾಧ್ಯವಾಗಿರಲಿಲ್ಲ. ಕಾಯ್ದಿರಿಸಿದ ಆಸನ ರದ್ದುಪಡಿಸುವಂತೆ ಪ್ರಯಾಣಕ್ಕಿಂತ 45 ದಿನ ಮುಂಚಿತವಾಗಿ ಮನವಿ ಮಾಡಿದ್ದರು. ಆದರೂ ಎಜನ್ಸಿಯವರು ಹೆಗಡೆ ಅವರ ಪೂರ್ತಿ ಹಣ ಮರಳಿ ಕೊಟ್ಟಿರಲಿಲ್ಲ. 20 ಸಾವಿರ ರೂ ಮಾತ್ರ ನೀಡಿ ಕೈ ಬಿಟ್ಟಿದ್ದರು.
ಉಳಿದ ಮೊತ್ತ ಮರು ಪಾವತಿಗಾಗಿಮನೋಹರ ಹೆಗಡೆಯವರು ಮಲ್ಲಿಕಾರ್ಜುನ್ ಟ್ರಾವೆಲ್ ಏಜೆನ್ಸಿ ವಿರುದ್ಧ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಆಯೋಗದ ಪ್ರಭಾರ ಅಧ್ಯಕ್ಷ ಮಂಜುನಾಥ ಎಂ ಬಮ್ಮನಕಟ್ಟಿ ಹಾಗೂ ಸದಸ್ಯೆ ವಿಶಾಲಾಕ್ಷಿ ಅಣ್ಣಪ್ಪ ಬೋಳಶೆಟ್ಟಿ ವಿಚಾರಣೆ ನಡೆಸಿದರು. ಮುಂಗಡವಾಗಿ ಪಾವತಿಸಿದ ಮೊತ್ತವನ್ನು ಪೂರ್ತಿಯಾಗಿ ಪಾವತಿಸಬೇಕು ಎಂದು ಅವರು ಆದೇಶಿಸಿದರು. ಟ್ರಾವೆಲ್ ಎಜನ್ಸಿಗೆ 20 ಸಾವಿರ ರೂ ಪರಿಹಾರ, 30 ಸಾವಿರ ರೂ ದಂಡ ಹಾಗೂ 10 ಸಾವಿರ ರೂ ಖರ್ಚಿನ ಜೊತೆ 40 ಸಾವಿರ ರೂಪಾಯಿಗೆ ಶೇ 12ರ ವಾರ್ಷಿಕ ಬಡ್ಡಿಯನ್ನು ಪಾವತಿಸಬೇಕು. ಗ್ರಾಹಕ ಕಲ್ಯಾಣ ನಿಧಿಗೂ 10 ಸಾವಿರ ದಂಡ ಪಾವತಿಸಬೇಕು ಎಂದು ಆದೇಶ ನೀಡಿದರು. ಹಿರಿಯ ವಕೀಲ ಡಿ ಆರ್ ಭಟ್ ಅವರು ಹೆಗಡೆಯವರ ಪರ ವಾದ ಮಂಡಿಸಿದ್ದರು.