ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಯಲ್ಲಾಪುರದ ಸಾತೊಡ್ಡಿ ಜಲಪಾತಕ್ಕೆ ಪ್ರವೇಶ ನಿಷೇಧಿಸಲಾಗಿದೆ.
ಕಳೆದ ಕೆಲ ದಿನಗಳಿಂದ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸಾತೊಡ್ಡಿ ಜಲಪಾತ ತುಂಬಿ ಹರಿಯುತ್ತಿದೆ. ಪ್ರವಾಸಿಗರ ಸುರಕ್ಷತೆ ಹಿನ್ನಲೆ ಜಲಪಾತ ಪ್ರವೇಶಕ್ಕೆ ಅರಣ್ಯ ಇಲಾಖೆ ತಡೆ ಒಡ್ಡಿದೆ. ಈ ಬಗ್ಗೆ ಸೋಮವಾರ ಆ ಭಾಗದಲ್ಲಿ ನಾಮಫಲಕವನ್ನು ಅಳವಡಿಸಲಾಗಿದೆ.
ಯಲ್ಲಾಪುರದ ಸಾತೊಡ್ಡಿ ಜಲಪಾತಕ್ಕೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರ ನಿಯಂತ್ರಣ ಸಹ ಆಡಳಿತಕ್ಕೆ ಸವಾಲಾಗಿದೆ. ಅದರಲ್ಲಿಯೂ ಮಳೆಗಾಲದಲ್ಲಿ ಸಾತೊಡ್ಡಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅವಾಂತರ ಸೃಷ್ಠಿಯಾಗುತ್ತಿದ್ದು, ಇದರಿಂದ ಪ್ರವಾಸಿಗರಿಗೆ ಸಹ ಅನಾನುಕೂಲವಾಗುತ್ತಿದೆ. ಈ ಎಲ್ಲಾ ಹಿನ್ನಲೆ ಮಳೆಗಾಲದ ಅವಧಿಯಲ್ಲಿ ಜಲಪಾತದ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ.
ಕಳೆದ ವರ್ಷ ಸಹ ಸಾತೊಡ್ಡಿ ಜಲಪಾತದ ಪ್ರವೇಶ ನಿಷೇಧಿಸಲಾಗಿತ್ತು. `ಜಲಪಾತಕ್ಕೆ ಪ್ರವೇಶ ನಿಷೇಧಿಸುವುದರಿಂದ ವ್ಯಾಪಾರ-ವಹಿವಾಟು ಮೇಲೆ ದುಷ್ಪರಿಣಾಮ ಬೀಳಲಿದೆ. ಹೀಗಾಗಿ ಭದ್ರತಾ ಸಿಬ್ಬಂದಿ ನೇಮಕ, ಸುರಕ್ಷತೆಗೆ ಒತ್ತು ನೀಡುವುದರ ಜೊತೆ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು’ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.