ಯಲ್ಲಾಪುರ ತಾಲೂಕಿನ ಮಲವಳ್ಳಿ ಬಾರೆ ಭಾಗದಲ್ಲಿ ಬಸ್ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾ.ಪಂ ವ್ಯಾಪ್ತಿಯ ಐದು ಗ್ರಾಮಗಳಿಗೆ ಕೇವಲ ಒಂದೇಒಂದು ಬಸ್ ಮಾರ್ಗ ನೀಡಲಾಗಿದೆ. ಇದರಿಂದಾಗಿ ಪ್ರತಿನಿತ್ಯ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಮಹಿಳೆಯರು, ವಯೋವೃದ್ಧರು, ಶಾಲಾ ವಿದ್ಯಾರ್ಥಿಗಳು ಬಸ್ ಏರಲಾರದ ಪರಿಸ್ಥಿತಿ ಉಂಟಾಗಿದೆ.
ಬಹುತೇಕ ದಿನಗಳಲ್ಲಿ ವಾಗಳ್ಳಿ, ಬಾಸಲ್ ಭಾಗದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾರದೇ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹೋಗಲು ಸಾಧ್ಯವಾಗದೇ ಶಿಕ್ಷಣದ ಮೇಲೆಯೂ ಪರಿಣಾಮ ಉಂಟಾಗುತ್ತಿದೆ.
ಹದಗೆಟ್ಟ ರಸ್ತೆ ಮತ್ತು ಬಸ್ಸುಗಳ ನಿರ್ವಹಣೆಯ ಕೊರತೆಯಿಂದಾಗಿ ಬಸ್ ಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಕಳೆದ ಸುಮಾರು ಹತ್ತು ದಿನಗಳಲ್ಲಿ 5 ಬಾರಿ ಮಲವಳ್ಳಿ ಮಾರ್ಗದ ಬಸ್ ಗಳು ಹಾಳಾಗಿವೆ. ಸಾರಿಗೆ ಸಂಸ್ಥೆ ಗುತ್ತಿಗೆ ಅಧಾರದಲ್ಲಿ ಖಾಸಗಿ ಡ್ರೈವರ್ ಗಳನ್ನು ನೇಮಿಸಿಕೊಂಡಿದ್ದು ಅಂತಹ ಚಾಲಕರು ನಿಷ್ಕಾಳಜಿ ಮತ್ತು ಅತೀವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದಾರೆ. ಕೆಲವೊಮ್ಮೆ ವಿವಿಧ ಕಾರಣ ಹೇಳಿ ಅರ್ಧಮಾರ್ಗದಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಾರೆ.
ಹೀಗೆ ಬಸ್ ನ ಅವ್ಯವಸ್ಥೆಯಿಂದ ಬೇಸತ್ತು ಹೋಗಿದ್ದ ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ವಿದ್ಯಾರ್ಥಿಗಳು ಆಗಸ್ಟ್ 4 ರಂದು ಬಸ್ ತಡೆದು ಪ್ರತಿಭಟನೆ ನಡೆಸಲು ನಿರ್ಣಯಿಸಿದ್ದರು. ಇದನ್ನು ತಿಳಿದ ಬಸ್ ಘಟಕದ ಅಧಿಕಾರಿಗಳು ಪ್ರತಿಭಟನೆ ನಡೆಸದಂತೆ ವಿನಂತಿಸಿ, ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ, ಸಮಸ್ಯೆ ಆಲಿಸಿದರು. ಸ್ಥಳೀಯರಾದ ಗಣಪತಿ ಗಾಂವ್ಕಾರ ವಾಗಳ್ಳಿ ಮತ್ತು ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯ ಸುಧಾರಣೆ ಕುರಿತು ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಅವ್ಯವಸ್ಥೆ ಸರಿಪಡಿಸಲು ಮಲವಳ್ಳಿ, ಬೇಣದಗುಳೇ ಮಾರ್ಗಕ್ಕೆ ಒಂದು, ಬಾರೆ, ಶಿಗೇಕೇರಿ ಮಾರ್ಗಕ್ಕೆ ಹೆಚ್ಚುವರಿಯಾಗಿ ಇನ್ನೊಂದು ವಸತಿ ಬಸ್ ಒದಗಿಸಬೇಕು. ಶಿಗೇಕೇರಿ ಮಾರ್ಗದ ವಸತಿ ಬಸ್ಸನ್ನು ಬಂಕೊಳ್ಳಿಯವರೆಗೆ ಮುಂದುವರೆಸಬೇಕು. ಹೋಗುವ ಡ್ರೈವರ್, ಕಂಡಕ್ಟರ್ ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಯಲ್ಲಾಪುರದಿಂದ ಸುಮಾರು 56 ಕಿ.ಮೀ. ದೂರದ ಮಾರ್ಗವಾಗಿದ್ದರಿಂದ ಸುಸ್ಥಿತಿಯಲ್ಲಿರುವ ಬಸ್ ಗಳನ್ನೇ ನೀಡಬೇಕು ಎಂಬ ಬೇಡಿಕೆಯನ್ನು ಅಧಿಕಾರಿಗಳ ಮುಂದೆ ಇಡಲಾಯಿತು.
ಇಷ್ಟೆಲ್ಲ ಬೇಡಿಕೆಗಳನ್ನು ಕೇಳಿದ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿ ಹೋದರು.
ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗುಳಿ, ಸದಸ್ಯರಾದ ದೀಪಕ ಭಟ್ಟ ಮಹಾಬಲೇಶ್ವರ ಭಟ್ಟ ಹಲ್ಗುಮನೆ, ಪಾರ್ವತಿ ಭಟ್ಟ, ರಂಜನಾ ಹುಲಸ್ವಾರ, ರಾಘವೇಂದ್ರ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ, ಸದಸ್ಯ ಟಿ, ಸಿ, ಗಾಂವ್ಕಾರ, ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಸದಾನಂದ ಭಟ್ಟ, ಯುವಕ ಸಂಘದ ಶ್ರೀರಾಮ ಭಟ್ಟ, ಗ್ರಾಮಸ್ಥರಾದ ರಾದ ವಿ. ಪಿ. ಹೆಬ್ಬಾರ್, ಪ್ರಸನ್ನ ಗಾಂವ್ಕಾರ, ಶಂಕರನಾರಾಯಣ ಭಟ್ಟ, ಶ್ರೀಪಾದ ಭಟ್ಟ, ಚಂದ್ರಕಾಂತ ಮರಾಠಿ, ತ್ರಯಂಬಕ ಹೆಗಡೆ, ಗ್ರಾ. ಪ. ಅಭಿವೃದ್ಧಿ ಅಧಿಕಾರಿ ಗಂಗಾಧರ ಭಟ್ಟ ಭಾಗವಹಿಸಿದ್ದರು.