ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಸಭೆಯು ಬೆಂಗಳೂರಿನ ವಿಧಾನ ಸೌಧದಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಚಿವರು ಸಮಿತಿಯ ಅಂತಿಮ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಲವು ಸಲಹೆಗಳನ್ನು ನೀಡಿದರು.
ಜಿಲ್ಲಾ ಸಮಿತಿಯ ಅಧ್ಯಕ್ಷ ಬೀರಣ್ಣ ನಾಯಕ ಮೊಗಟಾ ಮಾತನಾಡಿ ‘ಜಿಲ್ಲೆಯ ಮಾಮೂಲಿ ಪ್ರವಾಸಿ ತಾಣಗಳ ಹೊರತಾಗಿ ವಿವಿಧ ಇಪ್ಪತ್ತು ಬಗೆಯ ಪ್ರವಾಸೋದ್ಯಮದ ಸಾಧ್ಯತೆಯ ಬಗ್ಗೆ ವಿವರಿಸಿದರು.
ಮಳೆಯ ನೆವ ಮಾಡಿ ಜಲಪಾತಗಳನ್ನೊಳಗೊಂಡು ಅನೇಕ ಪ್ರವಾಸಿತಾಣಗಳಿಗೆ ಹೋಗದಂತೆ ತೆಗೆದುಕೊಂಡ ನಿರ್ಣಯ ಸರಿಯಲ್ಲ. ಅವುಗಳನ್ನು ಆದಷ್ಟು ಬೇಗ ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ದೀಪಾ ಛೋಳನ್, ಆಯುಕ್ತ ಅಕ್ರಮ ಫಾಷಾ, ಸಹ ನಿರ್ದೇಶಕಿ ಚೈತ್ರಾ ಬಿ.ಬಿ, ಸಮಿತಿಯ ಸದಸ್ಯರಾದ ಎಸ್.ಜಿ.ಹೆಗಡೆ ಬೆದೆಹಕ್ಲ, ವೇಣುಗೋಪಾಲ ಮದ್ಗುಣಿ, ಜಿ.ಎಂ ತಾಂಡುರಾಯನ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.







