ಯಲ್ಲಾಪುರ: ಪಟ್ಟಣ ಪಂಚಾಯತ ಚುನಾವಣಾ ವೇಳೆ ಕಣ್ಮರೆಯಾಗಿದ್ದ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಗಣೇಶ ಹಬ್ಬಕ್ಕೆ ಊರಿಗೆ ಮರಳಿದ್ದಾರೆ.
ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ನಿಂದಿಸಿದ ಆರೋಪದ ಅಡಿ ಬಿಜೆಪಿ ಬೆಂಬಲಿತ ಪಟ್ಟಣ ಪಂಚಾಯತ ಸದಸ್ಯರಾಗಿದ್ದ ಸೋಮೇಶ್ವರ ನಾಯ್ಕ ಅವರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದರು. ಪಟ್ಟಣ ಪಂಚಾಯತ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸೋಮೇಶ್ವರ ನಾಯ್ಕ ಬಂಧನದ ಸಾಧ್ಯತೆ ಹಿನ್ನಲೆ ಅವರು ಕಣ್ಮರೆಯಾಗಿದ್ದರು. ಪ ಪಂ ಚುನಾವಣೆ ಹಿಂದಿನ ದಿನ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಮೇಲೆ ಪ್ರಕರಣ ದಾಖಲಿಸಿದ ಬಗ್ಗೆ ಬಿಜೆಪಿಗರು ಆಕ್ರೋಶವ್ಯಕ್ತಪಡಿಸಿದ್ದರು.
`ಪೊಲೀಸರು ದುರುದ್ದೇಶದಿಂದ ಜನಪ್ರತಿನಿಧಿ ಮೇಲೆ ಪ್ರಕರಣ ದಾಖಲಿಸಿದ್ದಾರೆ’ ಎಂದು ಬಿಜೆಪಿಗರು ದೂರಿದ್ದರು. ಜೊತೆಗೆ ಬಿಜೆಪಿ ಬೆಂಬಲಿತ ಪಟ್ಟಣ ಪಂಚಾಯತ ಸದಸ್ಯರು ಚುನಾವಣೆಯನ್ನು ಬಹಿಷ್ಕರಿಸಿದ್ದರು. ಮತದಾನದ ಹಕ್ಕು ಹೊಂದಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಮತದಾನಕ್ಕೆ ಬಂದಿರಲಿಲ್ಲ. `ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸೋಮೇಶ್ವರ ನಾಯ್ಕ ಅವರ ಮೇಲೆ ಶಾಸಕರ ಕುಮ್ಮಕ್ಕಿನಿಂದ ಸುಳ್ಳು ಪ್ರಕರಣ ದಾಖಲಿಸಲಾಗಿದೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಸೇರಿ ಹಲವರು ದೂರಿದ್ದರು. `ಈ ನಡುವೆ ಸೋಮೇಶ್ವರ ನಾಯ್ಕ ಅಪಹರಣಕ್ಕೆ ಒಳಗಾಗಿರುವ ಶಂಕೆಯಿದೆ’ ಎಂದು ಪ ಪಂ ಸದಸ್ಯೆ ಶ್ಯಾಮಲಿ ಪಾಠಣಕರ್ ಅನುಮಾನ ವ್ಯಕ್ತಪಡಿಸಿದ್ದರು.
`ದುರುದ್ದೇಶದಿಂದ ಪೊಲೀಸ್ ದೂರು ದಾಖಲಿಸಿ ತೊಂದರೆ ನೀಡುವ ಪ್ರಯತ್ನ ನಡೆಸಲಾಗಿದ್ದು, ನನ್ನ ಮೇಲೆ ದಾಖಲಾದ ಪ್ರಕರಣಕ್ಕೆ ನ್ಯಾಯಾಲಯ ಸ್ಟೇ ನೀಡಿದೆ. ತನ್ನನ್ನು ಯಾರೂ ಅಪಹರಿಸಿಲ್ಲ. ಕಾಂಗ್ರೆಸ್ಸಿಗರು ಕುತಂತ್ರದಿAದ ಪಟ್ಟಣ ಪಂಚಾಯತ ಆಡಳಿತ ಹಿಡಿದಿದ್ದಾರೆ’ ಎಂದು ಸೋಮೇಶ್ವರ ನಾಯ್ಕ ಹೇಳಿದ್ದಾರೆ. ಮೂರು ದಿನಗಳ ಹಿಂದೆ ಮನೆಗೆ ಆಗಮಿಸಿದ ಅವರು ಗಣೇಶ ಉತ್ಸವದಲ್ಲಿ ಭಾಗಿಯಾಗಿದ್ದು, ರವೀಂದ್ರ ನಗರದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದಾರೆ.