ನಿಷೇಧದ ನಡುವೆಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಲಾಟರಿ ಮಾರಾಟ ನಡೆದಿದೆ. ಕೆಲವಡೆ ಪ್ರಾಮಾಣಿಕವಾಗಿ ಸದಸ್ಯರಿಗೆ ಲೆಕ್ಕ ಒಪ್ಪಿಸಿದ ಗಣೇಶ ಉತ್ಸವ ಸಮಿತಿಯವರು ಅದರಲ್ಲಿ ಪೊಲೀಸರಿಗೆ ಕೊಟ್ಟ ಹಣವನ್ನು ನಮೂದಿಸಿದ್ದಾರೆ!
2007ರಲ್ಲಿ ರಾಜ್ಯದಲ್ಲಿ ಲಾಟರಿ ನಿಷೇಧ ಕಾಯ್ದೆ ಜಾರಿಯಾಗಿದ್ದು, ಹಬ್ಬ-ಹರಿದಿನ-ಉತ್ಸವಗಳ ನೆಪದಲ್ಲಿ ಲಾಟರಿ ಮಾರಾಟ ಜೋರಾಗಿ ನಡೆಯುತ್ತಿದೆ. ಈ ಅವಧಿಯಲ್ಲಿ ಯಾವುದೇ ಅಳುಕಿಲ್ಲದೇ ಹಲವರು ಅನಧಿಕೃತ ಲಾಟರಿ ಮಾರಾಟ ಮಾಡುತ್ತಾರೆ. ಆದರೆ, ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಿಯೂ ಲಾಟರಿ ಕೂಪನ್ ಮಾರಾಟ ಮಾಡಬಾರದು ಎಂದು ಜಿಲ್ಲಾಡಳಿತ ಸೂಚಿಸಿದ್ದು, ಜಿಲ್ಲಾಡಳಿತದ ಸೂಚನೆ ಬರುವ ಮೊದಲೇ ಅನೇಕರು ಲಾಟರಿ ಟಿಕೆಟ್ ಖರೀದಿಸಿದ್ದರು!
ಅದಾಗಿಯೂ ಸಾವಿರಾರು ಸಂಖ್ಯೆಯಲ್ಲಿ ಮುದ್ರಿಸಿದ್ದ ಲಾಟರಿ ಟಿಕೆಟ್ ಉಳಿದುಕೊಂಡಿದ್ದವು. ಸುಮ್ಮನೆ ಅದನ್ನು ಏಕೆ ಬಿಸಾಡುವುದು? ಎಂದು ಯೋಚಿಸಿದ ಕೆಲ ಗಣೇಶ ಉತ್ಸವ ಸಮಿತಿಯವರು ಅದನ್ನು ಮಾರಾಟ ಮಾಡಿದರು. 25ರೂಪಾಯಿಯಿಂದ 100ರೂಪಾಯಿ ಒಳಗಿನ ಲಾಟರಿ ಚೀಟಿ ಖರೀದಿಸಿದರೆ ಬೈಕ್, ಬಂಗಾರದ ಉಂಗುರ, ಮೊಬೈಲ್, ಪ್ರಿಡ್ಜ್, ಬೈಕ್, ವಾಶಿಂಗ್ ಮಿಷಿನ್ ಸೇರಿದಂತೆ ಹಲವು ವಸ್ತುಗಳು ಬಹುಮಾನವಾಗಿ ದೊರೆಯುವ ಬಗ್ಗೆ ಯೋಜಿಸಿದ ಗ್ರಾಹಕರು ಮುಗಿಬಿದ್ದು ಲಾಟರಿ ಚೀಟಿ ಖರೀದಿಸಿದರು.
ಲಾಟರಿ ಚೀಟಿ ಮಾರಾಟದಿಂದ ಗಣೇಶ ಉತ್ಸವ ಸಮಿತಿಯವರಿಗೆ ಲಕ್ಷಾಂತರ ರೂ ಸಂಗ್ರಹವಾಗಿದೆ. ಲಾಟರಿ ವಿಜೇತರಿಗೆ ನೀಡಬಹುದಾದ ಬಹುಮಾನಗಳನ್ನು ಖರೀದಿಸಿಯಾಗಿದೆ. ಇನ್ನೂ ಕೆಲವು ಕಡೆ ಬಹುಮಾನದ ಹಣವನ್ನು ಕೆಲ ಉದ್ದಿಮೆದಾರರು ನೀಡಿದ್ದು, ಲಾಟರಿಯಿಂದ ಸಂಗ್ರಹವಾದ ಹಣ ಹಾಗೇ ಉಳಿದಿದೆ. ಈ ಹಣವನ್ನು ಬಳಸಿ ದೊಡ್ಡ ದೊಡ್ಡ ಧ್ವನಿ ವರ್ಧಕಗಳನ್ನು ಗಣೇಶ ಉತ್ಸವ ಸಮಿತಿಯವರು ತರಿಸಿದ್ದಾರೆ. ದೊಡ್ಡದಾಗಿ ಹಾಡು ಹಾಕಿ ಕುಣಿದು ಕುಪ್ಪಳಿಸುತ್ತಿದ್ದಾರೆ.
ಜಿಲ್ಲಾಡಳಿತದ ಆದೇಶಕ್ಕೆ ಬೆಲೆಯೇ ಇಲ್ಲ!
ಲಾಟರಿ ಮಾರಾಟ ಮಾಡಬಾರದು ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಈ ಆದೇಶಕ್ಕೆ ಬೆಲೆಯೇ ಇಲ್ಲ. ಲಾಟರಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸ್, ಪಿಂಚಣಿ ಹಾಗೂ ವಾಣಿಜ್ಯ ಇಲಾಖೆಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದ್ದು ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಈ ಸೂಚನೆ ಪಾಲನೆಯಾಗಿಲ್ಲ. ಇನ್ನೂ ಲಾಟರಿ ಖರೀದಿಸಿದವರು ಹಾಗೂ ಮಾರಾಟಗಾರರು ಈ ಬಗ್ಗೆ ಅರಿವಿದ್ದರೂ ಅಧಿಕೃತ ದೂರು ನೀಡಿಲ್ಲ. ಹೀಗಾಗಿ ಎಲ್ಲಾ ವಿಷಯ ಗೊತ್ತಿದ್ದರೂ ಎಲ್ಲರೂ ಸುಮ್ಮನಿದ್ದಾರೆ. ಈ ವಿಷಯದಲ್ಲಿ `ಊರ ಉಸಾಬರಿ ನಮಗ್ಯಾಕೆ?’ ಎಂದು ಪ್ರಶ್ನಿಸುವವರ ಸಂಖ್ಯೆ ಹೆಚ್ಚಿದ್ದರೂ ಬಹಿರಂಗವಾಗಿ ಎಲ್ಲಾ ವಿಷಯ ಹೇಳಿಕೊಳ್ಳಲು ಆಗದ ಕೆಲವರು ಮಾಧ್ಯಮಗಳಿಗೆ ಲಾಟರಿ ಫೋಟೋ ರವಾನಿಸಿದ್ದಾರೆ.
ಪೊಲೀಸ್ ಲೆಕ್ಕ!
ಜಿಲ್ಲೆಯ ಒಂದು ಕಡೆ ಗಣೇಶ ಉತ್ಸವ ಸಮಿತಿಯವರು ದೊಡ್ಡದಾಗಿ ಡಿಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ ಡಿಜೆ ಶಬ್ದ ಕಡಿಮೆ ಮಾಡುವಂತೆ ಸೂಚಿಸಿದ್ದು, ಅದಕ್ಕೆ ಒಪ್ಪದ ಉತ್ಸವ ಸಮಿತಿಯವರು ಪ್ರಭಾವಿ ಜನಪ್ರತಿನಿಧಿಯೊಬ್ಬರಿಂದ ಪೊಲೀಸ್ ಠಾಣೆಗೆ ಫೋನು ಮಾಡಿಸಿದ್ದಾರೆ. ಪೊಲೀಸ್ ಠಾಣೆಯಿಂದ ಪೊಲೀಸ್ ಸಿಬ್ಬಂದಿಗೆ ತಕ್ಷಣ ಫೋನ್ ಬಂದಿದ್ದು, ಅಲ್ಲಿಂದ ಹೊರಡುವಂತೆ ಸೂಚನೆ ಬಂದಿದೆ. ಹೀಗೆ ಹೊರಡುವಾಗ ಆ ಪೊಲೀಸ್ ಸಿಬ್ಬಂದಿ ಉತ್ಸವ ಸಮಿತಿಯವರನ್ನು ಕಾಡಿಬೇಡಿ 1 ಸಾವಿರ ರೂ ಪಡೆದಿದ್ದು, ಗಣೇಶ ಉತ್ಸವದ ಲೆಕ್ಕಾಚಾರದಲ್ಲಿ ಸಮಿತಿ ಸದಸ್ಯರ ಮುಂದೆ ಪೊಲೀಸರಿಗೆ ಕೊಟ್ಟ ಸಾವಿರ ರೂ ಬಗ್ಗೆ ಚರ್ಚೆ ನಡೆದಿದೆ.
ಸಾವಿರ ರೂ ಪಡೆದ ಪೊಲೀಸ್ ಸಿಬ್ಬಂದಿ ವಿರುದ್ಧ ಗಣೇಶ ಉತ್ಸವ ಸಮಿತಿಯವರು ದೂರು ನೀಡುವ ಚಿಂತನೆ ನಡೆಸಿದ್ದಾರೆ. ಆದರೆ, ಲಾಟರಿ ಮಾರಾಟ ಮಾಡಿದ ಬಗ್ಗೆಯೂ ಪ್ರಶ್ನೆ ಉದ್ಬವಿಸುವ ಕಾರಣ ಪೊಲೀಸ್ ದೂರು ಬೇಡ ಎಂದು ಕೆಲ ಸದಸ್ಯರು ಒತ್ತಡ ಹಾಕಿದ್ದಾರೆ. ಇದರೊಂದಿಗೆ `ಇನ್ನೂ ಗಣೇಶ ವಿಸರ್ಜನೆ ನಡೆದಿಲ್ಲ. ಈಗ ದೂರು ನೀಡಿದರೆ ಗಣೇಶ ವಿಸರ್ಜನೆಗೆ ತೊಂದರೆ ಕೊಡುವ ಸಾಧ್ಯತೆ ಹೆಚ್ಚಿದೆ. ಅದಾದ ನಂತರ ಮುಂದಿನ ಯೋಜನೆ ಮಾಡೋಣ’ ಎಂದು ಗಣೇಶ ಉತ್ಸವ ಸಮಿತಿಯ ಹಿರಿಯ ಸದಸ್ಯರು ಯುವ ನಾಯಕರಿಗೆ ಕಿವಿಮಾತು ಹೇಳಿದ್ದಾರೆ!
ಜಿಲ್ಲೆಗೆ ಬಂದ ಮೂರು ತಿಂಗಳಿನೊಳಗೆ ಪ್ರಭಾವಿಗಳ ಮಾತಿಗೂ ಬಗ್ಗದೇ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಲಾಟರಿ ವಿಷಯ ಜಾಲಾಡಿದರೆ ಅದೂ ಸಹ ಪೊಲೀಸ್ ಸಿಬ್ಬಂದಿ ತಲೆಮೇಲೆ ಬರಲಿದೆ. ಈ ಹಿನ್ನಲೆ ಸಾವಿರ ರೂ ಪಡೆದ ಭದ್ರತಾ ಸಿಬ್ಬಂದಿ ತಲೆಬಿಸಿ ಮಾಡಿಕೊಂಡಿದ್ದು, ಗಣಪನ ಜೊತೆ ಉತ್ಸವ ಸಮಿತಿಯವರ ಪಾದಕ್ಕೂ ನಮಸ್ಕರಿಸಲು ಮುಂದಾಗಿದ್ದಾರೆ!