ಕುಮಟಾ: ಕಾರವಾರದ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಸಕ್ರಿಯವಾಗಿರುವ ನ್ಯಾಯವಾದಿ ವೆಂಕಟೇಶ್ ಕರಿಯಪ್ಪ ಗೌಡ ಅವರನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸನ್ಮಾನಿಸಿದರು.
ವಕೀಲರ ದಿನಾಚರಣೆ ಅಂಗವಾಗಿ ನ್ಯಾಯವಾದಿಗಳ ಸೇವೆಯನ್ನು ಸ್ಮರಿಸಿ ಈ ಸನ್ಮಾನ ನಡೆಯಿತು. ವೆಂಕಟೇಶ ಗೌಡ ಅವರು ಕುಮಟಾ ತಾಲೂಕಿನ ಮಾಸೂರಿನ ಲುಕ್ಕೇರಿ ಗ್ರಾಮದವರು. ಸಹಾಯಕ ಸರಕಾರಿ ಅಭಿಯೋಜಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಅವರು ವಕೀಲ ವೃತ್ತಿಯನ್ನು ಆರಿಸಿಕೊಂಡವರು. 2015ರಲ್ಲಿ ಕುಮಟಾದಲ್ಲಿ ನ್ಯಾಯವಾದಿಯಾಗಿ ವೃತ್ತಿ ಜೀವನ ಶುರು ಮಾಡಿದ ಅವರು ಜನ ಸಾಮಾನ್ಯರಿಗೆ ತಮ್ಮಿಂದ ಆದ ನೆರವು ನೀಡುತ್ತ ಬಂದಿದ್ದಾರೆ. ಅನ್ಯಾಯಕ್ಕೆ ಒಳಗಾದವರಿಗೆ ಕಾನೂನು ಮಾಹಿತಿ ನೀಡುತ್ತಾರೆ.
ವೆಂಕಟೇಶ ಗೌಡ ಅವರನ್ನು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಸನ್ಮಾನಿಸಿದರು. ನಂತರ ಮಾತನಾಡಿದ ಅವರು `ನ್ಯಾಯವಾದಿಯಾಗಿರುವ ವೆಂಕಟೇಶ ಗೌಡ ಅವರು ನ್ಯಾಯಾಧೀಶರಾಗುವ ಕನಸು ಕಂಡಿದ್ದಾರೆ. ಅವರ ಕನಸು ಈಡೇರಲಿ’ ಎಂದು ಹಾರೈಸಿದರು. `ಈಚೆಗೆ ವಕೀಲರ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗಿದ್ದು, ಇಂಥವುಗಳನ್ನು ತಡೆಯಲು ಕಠಿಣ ಕಾನೂನು ಅಗತ್ಯ’ ಎಂದು ಪ್ರತಿಪಾದಿಸಿದರು.
ಪ್ರಮುಖರಾದ ಮಂಜುನಾಥ್ ಅಂಬಿಗ, ಶೇಶಗಿರಿ ಗೌಡ, ಸುಧಾಕರ ನಾಯ್ಕ ಈ ವೇಳೆ ಇದ್ದರು.




