ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾದ ಜಗನ್ನಾಥ ಹಾಗೂ ಲೋಕೇಶ ಅವರ ಮರಣಪತ್ರ ಈವರೆಗೂ ಅವರ ಕುಟುಂಬಕ್ಕೆ ಸಿಗದ ಕಾರಣ ಉತ್ತರ ಕನ್ನಡ ಜಿಲ್ಲಾಡಳಿತದ ವಿರುದ್ಧ ಆರ್ಯ ಈಡಿಗ ಮಹಾ ಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಗಂಗಾವಳಿ ನದಿಯಲ್ಲಿ ಸಿಕ್ಕ ಮೂಳೆಯ ಡಿಎನ್‌ಎ ವರದಿ ಬಾರದಿರುವ ಬಗ್ಗೆಯೂ ಅವರು ಕಿಡಿಕಾರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಶಿರೂರು ಗುಡ್ಡ ದುರಂತದಲ್ಲಿ 6 ದಿನದ ಊಟಕ್ಕಾಗಿ 3 ಲಕ್ಷ ರೂ ವೆಚ್ಚ ಮಾಡಲಾಗಿದೆ. ಡ್ರೋಣ್ ಹಾರಾಟಕ್ಕೆ 25 ಲಕ್ಷ ರೂ ವೆಚ್ಚವಾಗಿದೆ ಎಂಬ ಲೆಕ್ಕ ನೀಡಿದ್ದು, ಕಾರ್ಯಾಚರಣೆಯಲ್ಲಿ ಅವ್ಯವಹಾರ ನಡೆದಿದೆ’ ಎಂದು ದೂರಿದರು. `ಇದು ಕೇವಲ 6 ದಿನದ ವೆಚ್ಚದ ಮಾಹಿತಿಯಾಗಿದ್ದು, ಇನ್ನೂ 50 ದಿನದ ವೆಚ್ಚದ ಬಗ್ಗೆ ಅಧಿಕಾರಿಗಳು ಮಾಹಿತಿ ಕೊಟ್ಟಿಲ್ಲ. ಎಲ್ಲಾ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಪಾಲುದಾರರಾಗಿದ್ದಾರೆ’ ಎಂದು ಆರೋಪಿಸಿದರು.
ಸ್ವಾಮೀಜಿ ಹೇಳಿದ್ದು ಸತ್ಯವಲ್ಲ!
ಡ್ರೋಣ್ ಬಳಕೆಗೆ 25 ಲಕ್ಷ ರೂ ವೆಚ್ಚವಾಗಿದೆ ಎಂದು ಸ್ವಾಮೀಜಿ ಸುದ್ದಿಗಾರರಿಗೆ ಹೇಳಿದ್ದು, ಅದು ಸತ್ಯವಲ್ಲ. ದಾಖಲೆಗಳಲ್ಲಿ 2.5 ಲಕ್ಷ ರೂ ವೆಚ್ಚವಾದ ಬಗ್ಗೆ ಮಾಹಿತಿಯಿದ್ದು, ಅದನ್ನು ತಪ್ಪಾಗಿ ಅರಿತ ಸ್ವಾಮೀಜಿ 25 ಲಕ್ಷ ಎಂದು ಹೇಳಿಕೆ ನೀಡಿದ್ದಾರೆ!
ಪೊಲೀಸರ ವಿರುದ್ಧ ಗರಂ!
`ಹೆದ್ದಾರಿ ಅಗಲೀಕರಣದಲ್ಲಿ ಲೋಪವೆಸಗಿದ IRB ಕಂಪನಿಯ 8 ಜನರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಅದಾಗಿಯೂ ಪೊಲೀಸರು ಒಂದು ಪ್ರಕರಣ ಮಾತ್ರ ದಾಖಲಿಸಿದ್ದು, 8 ಜನರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಈ ರೀತಿ ಪ್ರಕರಣ ದಾಖಲಿಸುವ ಅಗತ್ಯವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ನ್ಯಾಯಾಲಯಕ್ಕೆ ಹೇಳಿದ್ದು, IRB ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು. `ನಾನು ದಿನಕ್ಕೆ 15 ಬಾರಿ ಫೋನ್ ಮಾಡಿದರೂ ಪೊಲೀಸ್ ವರಿಷ್ಠಾಧಿಕಾರಿಗಳು ಫೋನ್ ಸ್ವೀಕರಿಸಲ್ಲ. ಅವರು ಐಆರ್‌ಬಿ ಕಂಪನಿ ಜೊತೆ ಹೊಂದಾಣಿಕೆ ಮಾಡಿಕೊಂಡ ಅನುಮಾನವಿದೆ’ ಎಂದು ಸಂಶಯ ವ್ಯಕ್ತಪಡಿಸಿದರು.
ಈ ಸ್ವಾಮೀಜಿ ತನಿಖಾಧಿಕಾರಿ
`ಸಿಕ್ಕಿದ ಮೂಳೆ ಮೇಲೆ ಕೆಮಿಕಲ್ ಸುರಿದವರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಮಧು ಎಂಬ ವ್ಯಕ್ತಿ ಗೋವಾಗೆ ಬಂದರೆ ಪೊಲೀಸರ ವಾಹನ ತೆರಳಿ ಆತನನ್ನು ಕರೆದುಕೊಂಡು ಬರುತ್ತದೆ. ಆತ ಯಾರು? ಎಂದು ಎಲ್ಲರಿಗೂ ಗೊತ್ತಾಗಬೇಕು’ ಎಂದು ಆಗ್ರಹಿಸಿದರು. `ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ನವೀಕರಣ ಕೆಲಸದಲ್ಲಿಯೂ ಅವ್ಯವಹಾರ ನಡೆದಿದೆ. ಎಸ್ಪಿ ಕಚೇರಿ ಕಾಮಗಾರಿಗಳ ಬಗ್ಗೆಯೂ ತನಿಖೆ ಮಾಡಿಸುತ್ತೇವೆ’ ಎಂದು ಸವಾಲು ಹಾಕಿದರು. ದೇವರಾಜ ನಾಯ್ಕ, ಶ್ರೀಧರ ನಾಯ್ಕ, ದಾಮೋದರ ನಾಯ್ಕ, ರಾಜೇಶ ನಾಯ್ಕ, ಮನಿಷಾ, ವಿನೋದ ನಾಯ್ಕ, ಶ್ರೀನಿವಾಸ ನಾಯ್ಕ ಇತರರು ಇದ್ದರು.




