ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಲೆಕ್ಕಾಧಿಕಾರಿಗಳು ನಡೆಸುತ್ತಿರುವ ಮುಷ್ಕರ ಮುಂದುವರೆದಿದೆ. ಈ ಮುಷ್ಕರಕ್ಕೆ ವಿವಿಧ ಸಂಘಟನೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಮಕ್ಕಳ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ವಿತರಣೆಗೆ ಸಮಸ್ಯೆಯಾಗುತ್ತಿದ್ದು, ನೌಕರರ ಬೇಡಿಕೆ ಈಡೇರಿಸದೇ ಇದ್ದರೆ ಶಾಲಾ ವಿದ್ಯಾರ್ಥಿಗಳನ್ನು ಮುಷ್ಕರಕ್ಕೆ ಕರೆತರುವುದಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರ ಬರೆದಿದ್ದಾರೆ.
ಫೆ 12ರಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಈ ಬಗ್ಗೆ ಪತ್ರ ರವಾನಿಸಿದರು. `2024ರ ಅಕ್ಟೊಬರ್ 10ರಂದು ಸಹ ನೌಕರರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಪ್ರಮುಖ 19 ಬೇಡಿಕೆಗಳ ಪೈಕಿ 2 ಬೇಡಿಕೆ ಮಾತ್ರ ಈಡೇರಿಸಲಾಗಿದೆ. ಇದರಿಂದ ಸಾರ್ವಜನಿಕ ಕೆಲಸಗಳಿಗೂ ಸಮಸ್ಯೆಯಾಗಿದೆ’ ಎಂದು ಅವರು ವಿವರಿಸಿದ್ದಾರೆ.
`ಈ ಹಿಂದೆ ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಅದನ್ನು ಈಡೇರಿಸಿಲ್ಲ. ಸಚಿವರು ನುಡಿದ ಮಾತನ್ನು ಪಾಲಿಸುತ್ತಿಲ್ಲ. ಈ ಮೊದಲು ನೀಡಿದ ಅರ್ಜಿಗೂ ಹಿಂಬರಹ ನೀಡಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು. `ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರದಿಂದ ಮಕ್ಕಳಿಗೆ ಸಮಸ್ಯೆಯಾಗಿದೆ. ಈ ಹಿನ್ನಲೆ ಈ ಪ್ರತಿಭಟನೆಗೆ ಮಕ್ಕಳನ್ನು ಕರೆದುಕೊಂಡು ಬಂದು ಬೆಂಬಲ ವ್ಯಕ್ತಪಡಿಸುವ ಬಗ್ಗೆ ನಿರ್ಧರಿಸಲಾಗಿದೆ. ಕೂಡಲೇ ಬೇಡಿಕೆ ಈಡೇರದೇ ಇದ್ದರೆ ಮಕ್ಕಳ ಜೊತೆ ನಾವು ಪ್ರತಿಭಟನೆಗೆ ಕೂರುತ್ತೇವೆ’ ಎಂದವರು ಎಚ್ಚರಿಸಿದ್ದಾರೆ.
ಕುಮಟಾ ತಾಲೂಕ ಗ್ರಾಮ ಆಡಳಿತ ಅಧ್ಯಕ್ಷ ಚಂದ್ರಶೇಖರ್ ನಾಯ್ಕ, ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಇತರರು ಇದ್ದರು.




